ಮುದ್ದೇಬಿಹಾಳ ಪುರಸಭೆ ಗದ್ದುಗೆಗೆ ಅನಿರೀಕ್ಷಿತ ಫಲಿತಾಂಶ ಸಾಧ್ಯತೆ

MBL 14-1
Published on

ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ

ಅತಂತ್ರ ಲಿತಾಂಶ ಹೊಂದಿರುವ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಚಟುವಟಿಕೆ ಬಿರುಸುಗೊಂಡಿವೆ. ಮೂರೂ ಪಕ್ಷದವರಲ್ಲಿ ಅಧ್ಯಕ್ಷ ಹುದ್ದೆಗೆ ಏರಬೇಕು ಎಂಬ ಹುಮ್ಮಸ್ಸು ಮೂಡಿದ್ದು ಯಾರು ಪುರಸಭೆ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮುದ್ದೇಬಿಹಾಳ ಪುರಸಭೆಯ ಒಟ್ಟು 23 ಸದಸ್ಯ ಬಲ ಇದ್ದು, ಅದರಲ್ಲಿ ತಲಾ ಎಂಟು ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಇಬ್ಬರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದು, ಐವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಮಾಜಿ ಶಾಸಕ ನಾಡಗೌಡ ಅವರು ಸಮ್ಮಿಶ್ರ ಸರ್ಕಾರದ ಪ್ರಭಾವ ಬಳಸಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲು ತರಲು ಯಶಸ್ವಿಯಾಗಿದ್ದರು. ಆದರೆ, ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಹಾಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾತಿ ತರುವಲ್ಲಿ ಯಶಸ್ವಿಯಾಗಿದ್ದು, ಸದ್ಯಕ್ಕೆ ಇದೇ ಮೀಸಲಾತಿಯಡಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.

ಕಾಂಗ್ರೆಸ್ ನಡೆ

ಪಕ್ಷೇತರ ಐವರು ಸದಸ್ಯರು, ಜೆಡಿಎಸ್‌ನ ಇಬ್ಬರು ಸದಸ್ಯರ ಬಲದೊಂದಿಗೆ ಅಧ್ಯಕ್ಷ ಗದ್ದುಗೆ ಏರುವ ಸಾಧ್ಯತೆ ಇದೆ. ಅದರಲ್ಲಿ ಮೂವರು ಸದಸ್ಯರಿದ್ದು, ಪ್ರೀತಿ ದೇಗಿನಾಳ, ಸೋನಾಬಾಯಿ ನಾಯಕ, ಭಾರತಿ ಪಾಟೀಲ ಅವರಲ್ಲಿ ಒಬ್ಬರಿಗೆ ಆದ್ಯತೆ ಸಿಗಲಿದೆ. ಅದರಲ್ಲೂ ಸೋನಾಬಾಯಿ ನಾಯಕ ಹಾಗೂ ಪ್ರೀತಿ ದೇಗಿನಾಳ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಫೈಟ್ ನಡೆಯಬಹುದೆಂಬ ಲೆಕ್ಕಾಚಾರವೂ ಇದೆ.

ಜೆಡಿಎಸ್ ಕಣ್ಣು

ಮುದ್ದೇಬಿಹಾಳ ತಾಪಂನಲ್ಲಿ ಕಾಂಗ್ರೆಸ್‌ಗೆ ಬಲ ಇದ್ದರೂ ಅಧ್ಯಕ್ಷ ಸ್ಥಾನಕ್ಕೆ ಏರಲಾಗಲಿಲ್ಲ. ಅಲ್ಲಿ ಜೆಡಿಎಸ್ ಸದಸ್ಯೆ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಅದೇ ಮಾದರಿಯ ಬೆಳವಣಿಗೆ ಪುರಸಭೆಯಲ್ಲೂ ನಡೆದರೆ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಸದಸ್ಯರಾದ ಪ್ರತಿಭಾ ಅಂಗಡಗೇರಿ ಹಾಗೂ ಚಾಂದಬಿ ಮಕಾನದಾರ ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬಹುದಾದ ಅವಕಾಶವಿದೆ. ಬಿಜೆಪಿ ಜತೆಗೂಡಿ ಅಧಿಕಾರ ರಚಿಸಿದ್ದೇ ಆದಲ್ಲಿ ಆಡಳಿತ ಪಕ್ಷದ ಶಾಸಕರು ಹೆಚ್ಚಿನ ಅನುದಾನ ತಂದು ವಾರ್ಡ್ ಸದಸ್ಯರ ಬೆನ್ನಿಗೆ ನಿಲ್ಲಲು ಅವಕಾಶಗಳು ಹೆಚ್ಚಿವೆ. ಆದರೆ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿರುವುದರಿಂದ ಅನುದಾನಕ್ಕಾಗಿ ಸರ್ಕಾರದ ಎದುರು ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದರೆ ಜೆಡಿಎಸ್ ಹಾಗೂ ಪಕ್ಷೇತರರ ನಿಲುವು ಇಲ್ಲಿ ಮುಖ್ಯವಾಗಲಿದೆ.

ಬಿಜೆಪಿ ನಡೆ

ಬಿಜೆಪಿಯಿಂದ ಎಂಟು ಸದಸ್ಯರ ಬಲದ ಜತೆಗೆ ಇನ್ನೂ ನಾಲ್ವರು ಸದಸ್ಯರ ಅವಶ್ಯಕತೆ ಇದೆ. ಈಗಾಗಲೇ ಪಕ್ಷೇತರರಲ್ಲಿ ಇಬ್ಬರು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಹಾಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಇನ್ನುಳಿದ ಸದಸ್ಯರಲ್ಲಿ ಯಾರನ್ನು ತಮ್ಮತ್ತ ಸೆಳೆಯುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ, ಶಾಸಕರದ್ದು ಒಂದು ಮತ ಇರುವ ಹಿನ್ನೆಲೆ ಬಿಜೆಪಿ ಅಷ್ಟು ಸುಲಭವಾಗಿ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೆ ಬಿಟ್ಟುಕೊಡಲಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಸಕ ನಡಹಳ್ಳಿ ಅವರು ಯಾವ ರಣತಂತ್ರ ರೂಪಿಸುತ್ತಾರೆ ? ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಜ್ಞಾತ ಸ್ಥಳದಲ್ಲಿರುವ ಸದಸ್ಯರು

ಕಾಂಗ್ರೆಸ್‌ನ ಸದಸ್ಯರಾದ ಭಾರತಿ ಪಾಟೀಲ, ಪ್ರೀತಿ ದೇಗಿನಾಳ, ರಫೀಕ್‌ಹ್ಮದ ದ್ರಾಕ್ಷಿ, ಶಿವಪ್ಪ ಹರಿಜನ, ಮಹಿಬೂಬ್ ಗೊಳಸಂಗಿ, ಪಕ್ಷೇತರರಾದ ಯಲ್ಲಪ್ಪ ನಾಯ್ಕಮಕ್ಕಳ, ವಿರೇಶ ಹಡಲಗೇರಿ, ಷರೀಾ ಮೂಲಿಮನಿ, ಶಹಜಾದಬಿ ಹುಣಸಗಿ, ರಿಯಾಜ ಢವಳಗಿ ಜೆಡಿಎಸ್ ಸದಸ್ಯರಾದ ಪ್ರತಿಭಾ ಅಂಗಡಗೇರಿ ಅಜ್ಞಾತ ಸ್ಥಳದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್‌ನ ಹಣಮಂತ ಭೋವಿ, ಅಲ್ಲಾಭಕ್ಷ ಢವಳಗಿ, ಸೋನಾಬಾಯಿ ನಾಯಕ, ಜೆಡಿಎಸ್‌ನ ಚಾಂದಬಿ ಮಕಾನದಾರ ಹಾಗೂ ಬಿಜೆಪಿಯ ಎಂಟು ಸದಸ್ಯರು ಸ್ಥಳೀಯವಾಗಿಯೇ ಇದ್ದಾರೆ.

ಪಕ್ಷೇತರ ಸದಸ್ಯರು ನಮ್ಮ ಪಕ್ಷದೊಂದಿಗೆ ಕೈ ಜೋಡಿಸಿದರೆ ಆಯಾ ವಾರ್ಡ್‌ಗಳಿಗೆ ಇನ್ನೂ ಹೆಚ್ಚಿನ ಅನುದಾನ ತಂದುಕೊಟ್ಟು ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವಾಗುತ್ತದೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇನೆ. ಅಲ್ಲದೆ, ಅಧ್ಯಕ್ಷ ಗಾದಿ ಹಿಡಿಯಬೇಕು ಎಂಬ ಉದ್ದೇಶದಿಂದ ಇನ್ನುಳಿದ ಸದಸ್ಯರಿಗೆ ಯಾವುದೇ ಒತ್ತಡ, ಆಮಿಷಗಳನ್ನು ಒಡ್ಡುವುದಿಲ್ಲ.ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net