

ಶಂಕರ ಈ.ಹೆಬ್ಬಾಳ
ಮುದ್ದೇಬಿಹಾಳ: ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ, ಔಷಧ ಗುಣ ಹೊಂದಿರುವ ಶತಾವರಿ ಜಿಲ್ಲೆಗೂ ಪದಾರ್ಪಣೆ ಮಾಡಿದ್ದು, ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಏನಿದು ಶತಾವರಿ?
ಶತಾವರಿ ಹೆಸರೇ ಹೇಳುವಂತೆ ನೂರು ಬೇರುಗಳ ಒಂದು ಸಸಿ. ಭೂಮಿಯೊಳಗಡೆ ಗಡ್ಡೆಗಳು ಬೆಳೆಯುವ ಮಾದರಿಯಲ್ಲಿ ಬೆಳೆ ಬೆಳೆಯುತ್ತದೆ. ಹೊಸ ತಲೆಮಾರಿನ ಜನರಿಗೆ ಈ ಬೆಳೆ ಹೊಸದು. ಕೆಲ ಸಾಂಪ್ರದಾಯಿಕ ಬೆಳೆಯನ್ನು ಬೆಳೆಯುವ ರೈತರು ಈ ಬೆಳೆ ಬಗ್ಗೆ ಕೇಳಿರುವುದು ಅಪರೂಪ. ಈ ಬೆಳೆ ವೆಚ್ಚದಾಯಕವಲ್ಲದ ಮತ್ತು ಆದಾಯ ತಂದುಕೊಡುವ ಔಷಧ ಬೆಳೆಯಾಗಿದ್ದು, ಜಿಲ್ಲೆಯ ರೈತರು ಇದರತ್ತ ಒಲವು ತೋರುತ್ತಿದ್ದಾರೆ.
ವೆಚ್ಚ ಎಷ್ಟು? ಏನು ಹೇಗೆ ?
ಶತಾವರಿ ಬೆಳೆ 18-24 ತಿಂಗಳಲ್ಲಿ ರೈತರ ಕೈಗೆ ಲ ಕೊಡುವ ಬೆಳೆಯಾಗಿದ್ದು, ಯಾವುದೇ ತರಹದ ಮಣ್ಣಿನಲ್ಲೂ ಇದು ಬೆಳೆಯುತ್ತದೆ. ವರ್ಷದ ಹನ್ನೆರಡು ತಿಂಗಳಲ್ಲೂ ಇದನ್ನು ಬಿತ್ತನೆ ಮಾಡಬಹುದಾಗಿದೆ. ಆದರೆ ಸವಳು ಜವಳು ಜಮೀನಿನಲ್ಲಿ ಬೆಳೆಯುವುದಿಲ್ಲ. ಒಂದು ಎಕರೆಗೆ ಅಂದಾಜು ಐದು ಸಾವಿರ ಸಸಿಗಳನ್ನು ನೆಡಬಹುದಾಗಿದೆ. ಒಂದೂವರೆ ಲಕ್ಷ ರೂ.ವರೆಗೆ ಖರ್ಚು ತಗಲುತ್ತದೆ. 3*3 ಅಳತೆಯಲ್ಲಿ ಸಸಿಯನ್ನು ನಾಟಿ ಮಾಡಬೇಕು. ರಾಸಾಯನಿಕ ಗೊಬ್ಬರ ಬದಲಾಗಿ ಕೊಟ್ಟಿಗೆ ಗೊಬ್ಬರ, ನೀರು, ಸಾವಯವ ಗೊಬ್ಬರ, ಜೀವಾಮೃತ ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. ಜಾನುವಾರು ಹಾವಳಿ, ಕಿರಿಕಿರಿ ಇಲ್ಲ. ಭೂಮಿಯೊಳಗಡೆ ಈ ಬೇರು ಬೆಳೆಯುವ ಕಾರಣ ಹೊಲದಲ್ಲಿ ಬೆಳೆ ಇದೆ ಎಂಬುದೂ ಗೊತ್ತಾಗುವುದಿಲ್ಲ. ಕಳ್ಳಕಾಕರ ಭಯವೂ ಇಲ್ಲ.
ರೋಗ ನಿರೋಧಕ, ಶಕ್ತಿ ವರ್ಧಕ
ಶತಾವರಿ ಬೆಳೆ ಹಾಲು ಉತ್ಪಾದನೆ ಹೆಚ್ಚಲು, ಮಹಿಳೆಯರ ಗರ್ಭಕೋಶದ ಸಮಸ್ಯೆಗಳಿಗೆ, ಅಸಿಡಿಟಿ ಸಮಸ್ಯೆ, ಮಹಿಳೆಯರ-ಪುರುಷರ ಗುಪ್ತ ರೋಗಗಳಿಗೆ ಹಾಗೂ ಶಕ್ತಿವರ್ಧಕವಾಗಿ ಬಳಕೆಯಾಗುತ್ತದೆ.
ಬೇರೆ ಜಿಲ್ಲೆಗಳಿಂದ ಬೆಳೆ ವೀಕ್ಷಣೆಗೆ ಬಂದ ರೈತರು
ವಿಜಯಪುರ -ಬಾಗಲಕೋಟೆ ಜಿಲ್ಲೆಯ ರೈತರಿಗೆ ಮೊದಲ ಬಾರಿಗೆ ಶತಾವರಿ ಸಸಿಯನ್ನು ವಿತರಿಸಿದ್ದು, ಹದಿನೆಂಟು ತಿಂಗಳ ಹಿಂದೆ ತಾಲೂಕಿನ ಸರೂರ ವ್ಯಾಪ್ತಿಯ ನಾಡಗೌಡರ ಹೊಲದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಟಾವು ಮಾಡುವ ಪ್ರಕ್ರಿಯೆಯನ್ನು ವೀಕ್ಷಿಸಲು ಬೇರೆ ಬೇರೆ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಭೂಮಿಯಿಂದ ಹೇಗೆ ಶತಾವರಿ ಬೆಳೆಯನ್ನು ಬೇರ್ಪಡಿಸಲಾಗುತ್ತದೆ ಎಂದು ವೀಕ್ಷಿಸಿ ತಜ್ಞರಿಂದ ಮಾಹಿತಿ ಪಡೆದರು.
ಸಾಂಪ್ರದಾಯಿಕ ಬೆಳೆಯನ್ನು ಬಿಟ್ಟು ಹೊಸ ಬೆಳೆಯತ್ತ ರೈತರು ಮುಖಮಾಡಬೇಕಿದೆ. ಶತಾವರಿ ಬೆಳೆ ಬಂಪರ್ ಬೆಳೆಯಾಗಿದೆ. ಎಲ್ಲರೂ ಒಂದೇ ಬೆಳೆಯನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ದರವೂ ಸಿಗುವುದಿಲ್ಲ. ಎಕರೆಗೆ ಅಂದಾಜು 10 ಲಕ್ಷ ರೂ.ಆದಾಯ ತಂದು ಕೊಡುತ್ತದೆ. ಶತಾವರಿ ಬೆಳೆ ಲಾಭದಾಯಕವಾಗಿದೆ.
ನೀಲಕಂಠರಾವ ನಾಡಗೌಡ(ಅಶೋಕ),ಶತಾವರಿ ಬೆಳೆದ ರೈತ
ಶತಾವರಿ ಬೆಳೆಯನ್ನು ರಾಜಸ್ಥಾನ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿರುವ ಔಷಧ ಕಂಪನಿಗಳು ಖರೀದಿಸುತ್ತವೆ.
ಅಪ್ಪಾಸಾಹೇಬ ಬುಗಡೆ, ಶತಾವರಿ ಸಸಿ ಪೂರೈಕೆದಾರ, ವಿಜಯಪುರ
ಶತಾವರಿ ಬೆಳೆಯನ್ನು ಬಿತ್ತನೆ ಮಾಡಿದ ಬಳಿಕವೂ ಹೊಲದಲ್ಲಿ ರೈತರು ಇತರ ತರಕಾರಿ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ. ಭೂಮಿಯೊಳಗಡೆ ಈ ಬೇರಿನ ರೂಪದಲ್ಲಿ ಬೆಳೆ ಬೆಳೆಯುವುದರಿಂದ ಮೇಲ್ಭಾಗದಲ್ಲಿ ಹೊಲ ಖಾಲಿ ಖಾಲಿಯಾದಂತೆ ಕಾಣುತ್ತದೆ. ಅದರಲ್ಲಿ ಬೇರೆ ತರಕಾರಿ ಬೆಳೆಗಳನ್ನು ಹಾಕಿ ವರ್ಷಪೂರ್ತಿ ಲಾಭ ಮಾಡಿಕೊಳ್ಳಬಹುದಾಗಿದೆ.
ಚಾಂದಭಾಷಾ ವಾಲಿಕಾರ(ಇಟಗಿ), ಶತಾವರಿ ಬೆಳೆ ಮಾರ್ಗದರ್ಶಕ