ಮೂಡಬಿದರೆಯಿಂದ ತಾಲೂಕಿಗೆ ಕಾರ್ಮಿಕರ ಆಗಮನ

MBL 25-1
Published on

ಮುದ್ದೇಬಿಹಾಳ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ಏ.20 ರಂದು ಹೊರಡಿಸಿದ ಆದೇಶದಂತೆ ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಮಿಕರನ್ನು ತಮ್ಮೂರಿಗೆ ತೆರಳಲು ಅವಕಾಶ ಕಲ್ಪಿಸುತ್ತಿದ್ದಂತೆ ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ತಾಲೂಕಿನ 19 ಕಾರ್ಮಿಕರನ್ನು ಮಂಗಳೂರು ಜಿಲ್ಲಾಡಳಿತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ಬಸ್ ಮೂಲಕ ಕಳುಹಿಸಿಕೊಟ್ಟಿದೆ.
ಮಂಗಳೂರು ಜಿಲ್ಲೆಯ ಮೂಡಬಿದರೆಯಲ್ಲಿ ಚೆರ‌್ರಿ ಕಲ್ಲಿನ ಕ್ವಾರಿಯಲ್ಲಿ ಕೆಲಸಕ್ಕೆ ಹೋಗಿದ್ದ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ, ಹಗರಗುಂಡ ಹಾಗೂ ಬ. ಬಾಗೇವಾಡಿಯ ಹೂವಿನ ಹಿಪ್ಪರಗಿ, ನಿಡಗುಂದಿ ಪಟ್ಟಣ ಸೇರಿ 19 ಕಾರ್ಮಿಕರು ಮೊದಲನೇ ಬಸ್ ಮೂಲಕ ಮುದ್ದೇಬಿಹಾಳ ತಾಲೂಕಿಗೆ ಆಗಮಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕರು, ಕೋವಿಡ್-19 ಸಂದರ್ಭ ಮಂಗಳೂರು ಜಿಲ್ಲಾಡಳಿತ ನಮ್ಮನ್ನು ಒಂದು ಮಂದಿರದಲ್ಲಿ ಇರಿಸಿದ್ದರು. ಕ್ವಾರಂಟೈನ್ ಅವಧಿ ಮುಗಿದಿದ್ದು, ಈಗ ಬಸ್ ಮೂಲಕ ಊರುಗಳಿಗೆ ತೆರಳಲು ಅವಕಾಶ ನೀಡಿದೆ. ಅಲ್ಲಿದ್ದ ವೇಳೆ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಬೇರೆ ಜಿಲ್ಲೆಯಿಂದ ಆಗಮಿಸಿದ ಕಾರ್ಮಿಕರನ್ನು ಥರ್ಮಲ್ ಸ್ಕಾೃನ್‌ಗೆ ಒಳಪಡಿಸಲಾಯಿತು. ತಾಲೂಕಾಡಳಿತ ವೈದ್ಯಾಧಿಕಾರಿ ಡಾ. ಸತೀಶ ತಿವಾರಿ ಮಾತನಾಡಿ, ಸದ್ಯಕ್ಕೆ ತಾಲೂಕಿಗೆ ಆಗಮಿಸುವ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಲ್ಲಿರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಆರ್‌ಬಿಎಸ್‌ಕೆ ವೈದ್ಯ ಡಾ. ಪ್ರವೀಣ ಸುಣಕಲ್, ಸಿಬ್ಬಂದಿ ಎಂ.ಎಸ್. ಗೌಡರ, ಸುಲೇಮಾನ್ ರುದ್ರವಾಡಿ, ಎಸ್.ಆರ್. ಸಜ್ಜನ, ಆಶಾ ಕಾರ್ಯಕರ್ತೆಯರಾದ ಮೋದಿನಮಾ ಮುಲ್ಲಾ,ಶಿವಕಾಂತ ಮೇಟಿ ಇದ್ದರು.
ಇದೇ ವೇಳೆ ತಾಲೂಕಿನ ಹಗರಗುಂಡದ ವಿರೇಶ ಕುಂಬಾರ ಎಂಬ ಬಾಲಕ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಗಮನಿಸಿದ ವೈದ್ಯಾಧಿಕಾರಿ ಡಾ. ತಿವಾರಿ ಅವರು ಬಾಲಕನಿಗೆ ತಾಳಿಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮಾತ್ರೆ ತೆಗೆದುಕೊಳ್ಳುವಂತೆ ತಿಳಿಸಿ ತಮ್ಮ ದೂರವಾಣಿ ಸಂಖ್ಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net