

ಮುದ್ದೇಬಿಹಾಳ :ಗ್ರಾಮದ ನಮ್ಮ ಓಣಿಗೆ ಪೂರೈಕೆ ಮಾಡಿರುವ ನೀರು ಗಬ್ಬು ವಾಸನೆ ಹೊಂದಿದೆ ಎಂದು ವಾಟರ್‌ಮನ್‌ಗೆ ಸಮಸ್ಯೆ ಹೇಳಿದರೆ, ಮಕ್ಕಳು, ಮಹಿಳೆಯರೆನ್ನದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆಂದು ಆಕ್ರೋಶ ವ್ಯಕ್ತಪಡಿಸಿದ ತಾಲೂಕಿನ ಬಿದರಕುಂದಿ ಗ್ರಾಪಂ ವ್ಯಾಪ್ತಿಯ ಮಾದಿನಾಳ ಗ್ರಾಮದ ನಿವಾಸಿಗಳು, ಮಹಿಳೆಯರು ವಾಟರ್‌ಮನ್ ಮೇಲೆ ಕ್ರಮ ಕೈಗೊಂಡು ಶುದ್ಧ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿದರು.
ಮಂಗಳವಾರ ಗ್ರಾಮದ ಮಡಿವಾಳೇಶ್ವರ ದೇವಸ್ಥಾನ ಆವರಣದಲ್ಲಿ ಪತ್ರಿಕೆ ಪ್ರತಿನಿಧಿಯೊಂದಿಗೆ ರುದ್ರಮ್ಮ ಪಾಟೀಲ ಮಾತನಾಡಿ, ನಮ್ಮೂರಿನ ವಾಟರ್‌ಮನ್ ಕುಡಿವ ನೀರಿನ ಪೂರೈಕೆ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾನೆ. ಕೊಳಚೆ ನೀರು ಪೂರೈಕೆಯಾಗಿದೆ ಎಂದು ನನ್ನ ಮಗ ಹೇಳಲು ಹೋದರೆ, ನೀವೇ ಮೂತ್ರ ಮಾಡಿ ಹಿಡಿದಿಟ್ಟಿರಬೇಕು. ಅದಕ್ಕೆ ವಾಸನೆ ಬರುತ್ತಿವೆ ಎಂದು ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಲಮ್ಮ ಬಿರಾದಾರ ಮಾತನಾಡಿ, ವಾಟರ್‌ಮನ್‌ಗೆ ಕುಡಿವ ನೀರಿನ ಸಮಸ್ಯೆ ಇದೆ ಎಂದು ಹೇಳಲು ಹೋದರೆ ನೀವು ಯಾರ ಮುಂದೆ ಹೊಯ್ಕತೀರಿ ಹೊಯ್ಕೋರಿ ಎನ್ನುತ್ತಿದ್ದಾನೆ. ಟ್ಯಾಂಕ್‌ನಲ್ಲಿ ಶುಚಿತ್ವ ಇಲ್ಲ. ಯಾವುದೋ ಪ್ರಾಣಿ ಸತ್ತಿರುವ ವಾಸನೆ ಸೋಮವಾರ ಪೂರೈಕೆ ಮಾಡಿರುವ ನೀರಿನಿಂದ ಬರುತ್ತಿದೆ. ನಮ್ಮ ಸಮಸ್ಯೆಯನ್ನು ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಯುವಕರಾದ ಪ್ರವೀಣ ಬಿರಾದಾರ ಹಾಗೂ ಬಸನಗೌಡ ಬಿರಾದಾರ ಮಾತನಾಡಿ, ನೀರು ಪೂರೈಕೆ ಆದರೂ ಕುಡಿಯಲು ಯೋಗ್ಯವಿಲ್ಲ. ಮೊದಲೇ ಸಾಂಕ್ರಾಮಿಕ ರೋಗಗಳ ಹಾವಳಿ ಎದ್ದಿದೆ. ನಮ್ಮ ಓಣಿಗೆ ಹದಿನೈದು ದಿನಗಳಿಂದ ಈ ಸಮಸ್ಯೆ ಇದ್ದರೂ ಪಿಡಿಒ ಬಂದು ಸಮಸ್ಯೆ ಆಲಿಸಿಲ್ಲ. ಗ್ರಾಮದಲ್ಲಿರುವ ಕೆಲ ಸಮುದಾಯಕ್ಕೊಂದು ನಮಗೊಂದು ತಾರತಮ್ಯ ಮಾಡುತ್ತಿದ್ದಾನೆ. ವಾಟರ್‌ಮನ್‌ಗೆ ಸರಿಯಾಗಿ ನೀರು ಬಿಡಲು ಕೇಳಿದರೆ ಅವರ ಸಂಬಂಧಿಕರೊಂದಿಗೆ ನೀರು ಕೇಳಿದವರ ಮೇಲೆಯೇ ಜಗಳಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಇಂಥ ವಾಟರ್‌ಮನ್ ನಮ್ಮ ಗ್ರಾಮಕ್ಕೆ ಬೇಡ. ಸರಿಯಾಗಿ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು. ಕೂಡಲೇ ನಮ್ಮ ಓಡಿಗೆ ನೀರಿನ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಬಿದರಕುಂದಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಂತಗೌಡ ಬಿರಾದಾರ, ಶೇಖರಗೌಡ ಬಿರಾದಾರ, ಸಂಗನಗೌಡ ಬಿರಾದಾರ, ರಾಚಯ್ಯ ಹಿರೇಮಠ, ಚನ್ನಪ್ಪಗೌಡ ಬಿರಾದಾರ, ರವಿ ಬಿರಾದಾರ, ಲಕ್ಕಣಗೌಡ ಬಿರಾದಾರ, ಸಿದ್ರಾಮಪ್ಪ ಬಿರಾದಾರ, ಗಿರಿಮಲ್ಲಯ್ಯ ಮಠ, ಚಂದ್ರ ಬಿರಾದಾರ, ಶಾಂತವ್ವ ಬಿರಾದಾರ, ಗಂಗಾಬಾಯಿ ಬಿರಾದಾರ ಮತ್ತಿತರರು ಇದ್ದರು.
ಗ್ರಾಮದಲ್ಲಿರುವ ಶುದ್ಧ ಕುಡಿವ ನೀರಿನ ಘಟಕ ಬಂದ್ ಆಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅದನ್ನು ಅಳವಡಿಸಿದ್ದರೂ ನೀರು ಮಾತ್ರ ಬರುತ್ತಿಲ್ಲ. ಗ್ರಾಮದಲ್ಲಿ ನಾಲ್ವರು ಗ್ರಾಪಂ ಸದಸ್ಯರಿದ್ದಾರೆ. ಅವರಿಗೆ ಈ ಸಮಸ್ಯೆಯ ಅರಿವಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕೆಲವರು ನೀರಿನ ಸಮಸ್ಯೆ ಇದ್ದರೂ ಏನೂ ಸಮಸ್ಯೆ ಇಲ್ಲದಂತಿದ್ದಾರೆ. ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.