ಮತ್ತೊಬ್ಬರ ಆಮಿಷಕ್ಕೆ ಮರುಳಾಗಬೇಡಿ

MBL-31-3
Published on

ಮುದ್ದೇಬಿಹಾಳ: ಮತ್ತೊಬ್ಬರ ಮೊಸಳೆ ಕಣ್ಣೀರಿನ ಅನುಕಂಪಕ್ಕೆ ಸೊಪ್ಪು ಹಾಕದೆ ಸ್ವಾಭಿಮಾನಿಗಳಾಗಿ ಫೆ.7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕುರುಬರ ಎಸ್‌ಟಿ ಹೋರಾಟದ ಸಮಾವೇಶ ಯಶಸ್ವಿಗೊಳಿಸಬೇಕೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಾಲೂಕು ಕುರುಬರ ಸಂಘದ ಕಚೆೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುರುಬರ ಎಸ್‌ಟಿ ಹೋರಾಟ ಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಪ್ರತಿ ಗ್ರಾಪಂನಲ್ಲಿ ಇಬ್ಬರು ಕುರುಬ ಸಮಾಜದ ಸದಸ್ಯರು ಆಯ್ಕೆಯಾಗಿದ್ದಾರೆ. ಅವರೇ ಸ್ವಂತ ಹಣ ಹಾಕಿದರೆ ಬೆಂಗಳೂರಿನವರೆಗೆ ವಾಹನ ಮಾಡಿಕೊಂಡು ಹೋಗಿ ಬರುವ ಸಾಮರ್ಥ್ಯ ಇದೆ. ಕುರುಬರಲ್ಲಿ ವಾಹನ ಬಾಡಿಗೆ ಮಾಡಿಕೊಂಡು ಹೋಗುವ ಸಾಮರ್ಥ್ಯ ಉಳ್ಳವರು ಇದ್ದಾರೆ. ಇನ್ನೊಬ್ಬರ ಬಳಿ ಕೈಯೊಡ್ಡಿ ವಾಹನ ಮಾಡಿಕೊಂಡು ಹೋಗುವುದು ಸರಿಯಲ್ಲ. ಇದು ಸಮಾಜದ ಹೆಸರು ಕೆಡಿಸಿದಂತಾಗುತ್ತದೆ. ಅದಕ್ಕೆ ಆಸ್ಪದ ನೀಡದೇ ಸ್ವಂತ ಹಣ ಖರ್ಚು ಮಾಡಿಕೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿ.ಎಸ್. ಮೇಟಿ, ಮಲ್ಲಿಕಾರ್ಜುನ ಗುರುವಿನ, ಪರಶುರಾಮ ನಾಗರಬೆಟ್ಟ ಮಾತನಾಡಿ, ಎಸ್‌ಟಿ ಹೋರಾಟದ ಸಮಾವೇಶ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಬೆಂಗಳೂರಿನಲ್ಲಿ ೆ.7 ರಂದು ಮೂಲೆ ಮೂಲೆಯಲ್ಲೂ ಕುರುಬ ಸಮಾಜದವರೇ ತುಂಬಿಕೊಳ್ಳಬೇಕು ಎಂದರು.

ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಬಿ.ಕೆ. ಬಿರಾದಾರ, ಎಸ್.ಎಸ್. ಪೂಜಾರಿ, ವಕೀಲರಾದ ಸಿದ್ದನಗೌಡ ಬಿರಾದಾರ, ಹಣಮಂತ್ರಾಯ ದೇವರಳ್ಳಿ,ನಾಗಪ್ಪ ರೂಢಗಿ, ರವಿ ಜಗಲಿ, ನರಸಮ್ಮ ಗುಬಚಿ ಮತ್ತಿತರರಿದ್ದರು.

ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 140 ಹಳ್ಳಿಗಳಿಂದ ಟ್ರಾೃಕ್ಸ್ ಮಾಡಿಕೊಂಡು ಸಮಾವೇಶಕ್ಕೆ ಕುರುಬ ಸಮಾಜದ ಬಾಂಧವರು ಬೆಂಗಳೂರಿಗೆ ತೆರಳಲಿದ್ದಾರೆ. ಮಹಿಳೆಯರಿಗಾಗಿ ಎರಡು ಬಸ್‌ಗಳನ್ನು ವೈಯಕ್ತಿಕ ಖರ್ಚಿನಲ್ಲಿ ವ್ಯವಸ್ಥೆ ಮಾಡುತ್ತೇನೆ. ಗ್ರಾಪಂ ಸದಸ್ಯರು ಚುನಾವಣೆಗೆ ಖರ್ಚು ಮಾಡಿದ್ದೇವೆ ಎಂದು ಸಮಾವೇಶಕ್ಕೆ ವಾಹನ ವ್ಯವಸ್ಥೆ ಮಾಡಿಕೊಂಡು ಬರಬೇಕು. ಮತ್ತೊಬ್ಬರ ಬಳಿ ಕೈಯೊಡ್ಡಿ ವಾಹನ ಮಾಡಿಕೊಂಡು ಬಂದು ಸಮಾಜದ ಗೌರವಕ್ಕೆ ಧಕ್ಕೆ ತರಬೇಡಿ.
ಎಂ.ಎನ್.ಮದರಿ, ಕುರುಬರ ಸಂಘದ ತಾಲೂಕಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net