ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ

CS Nadagouda
Published on

ಮುದ್ದೇಬಿಹಾಳ : ಅಧಿಕೃತವಾಗಿ ಜೆಡಿಎಸ್‌ನಿಂದ ಇಬ್ಬರು ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬಲ ಕುಗ್ಗಿದ್ದು, ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ ಬಲ ತುಂಬಲು ಸೇರ್ಪಡೆಯಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಪುರಸಭೆ ಲಿತಾಂಶ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಹದಿನೈದು ಸಂಖ್ಯಾ ಬಲದ ಮೇಲೆ ಕಾಂಗ್ರೆಸ್ ಬೆಂಬಲಿತ ಜೆಡಿಎಸ್- ಪಕ್ಷೇತರರು ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಹೆಚ್ಚಿನ ಒತ್ತು ಕೊಟ್ಟು ಮೂಲೆ ಮೂಲೆಯಲ್ಲೂ ವ್ಯತ್ಯಾಸವಿಲ್ಲದೆ ಅಭಿವೃದ್ಧಿ ಮಾಡಲಿ ಎಂದು ಹೇಳಿದರು. ಇಬ್ಬರೇ ಸದಸ್ಯರು ಇದ್ದು ಕಾಂಗ್ರೆಸ್ ಕಚೇರಿಗೆ ಹೋಗಿ ಸೇರ್ಪಡೆಯಾಗಿದ್ದಾರೆ. ಅವರೇ ಹೇಳಿಕೆ ನೀಡಿದ್ದಾರೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಗುರು ತಾರನಾಳ, ಯುವ ಮುಖಂಡ ಸಂತೋಷ ಚವಾಣ್, ಪುರಸಭೆ ಮಾಜಿ ಸದಸ್ಯರಾದ ಎಚ್.ಬಿ. ಸಾಲಿಮನಿ, ಕಾಮರಾಜ ಬಿರಾದಾರ, ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ, ಎನ್‌ಎಸ್‌ಯೂ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಹುಸೇನ್ ಮುಲ್ಲಾ, ವೈ.ಎಚ್.ವಿಜಯಕರ್ ಮತ್ತಿತರರಿದ್ದರು.

ಪತ್ನಿ-ಪತಿ ವ್ಯತಿರಿಕ್ತ ಹೇಳಿಕೆ
ಅವಿರೋಧ ಆಯ್ಕೆಯಾದ ಬಳಿಕ ಮಾಜಿ ಶಾಸಕ ಸಿ.ಎಸ್. ನಾಡಗೌಡ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ನೂತನ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ, ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು. ಆದರೆ, ಅವರ ಪತಿ ರುದ್ರಗೌಡ ಅಂಗಡಗೇರಿ ನಾವು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪತಿ ಹಾಗೂ ಪತ್ನಿಯ ಹೇಳಿಕೆ ವ್ಯತಿರಿಕ್ತವಾಗಿರುವುದು ಗೊಂದಲ ಮೂಡುವಂತಾಗಿದೆ.

ಪುರಸಭೆಯಲ್ಲಿ ಗೆದ್ದಿರುವುದು ಜೆಡಿಎಸ್ ಸದಸ್ಯರು
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ರಸೂಲ್ ದೇಸಾಯಿ ಮಾತನಾಡಿ, ಪುರಸಭೆಯಲ್ಲಿ ಇಬ್ಬರು ಸದಸ್ಯರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಎಂಟು ಜನ ಕಾಂಗ್ರೆಸ್, ಐವರು ಪಕ್ಷೇತರರು ಬೆಂಬಲ ಕೊಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಅಧಿಕೃತ ಸದಸ್ಯೆ ಪ್ರತಿಭಾ ಅಂಗಡಗೇರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದಿ. ವಿಮಲಾಬಾಯಿ ದೇಶಮುಖ ಅವರ ಕಾಲದಿಂದಲೂ ಜೆಡಿಎಸ್‌ನೊಂದಿಗೆ ನಂಟು ಹೊಂದಿದ್ದ ಶಹಜಾದಬಿ ಹುಣಸಗಿ ಆಯ್ಕೆಯಾಗಿದ್ದಾರೆ. ಪುರಸಭೆ ಅಧಿಕಾರದ ಗದ್ದುಗೆ ಜೆಡಿಎಸ್‌ಗೆ ಒಲಿದಿದೆ ಎಂದರು.

ಮಾಜಿ ಪಕ್ಷದ ಮುಖಂಡರಾದ ಅರವಿಂದ ಕಾಶಿನಕುಂಟಿ, ಭೀಮನಗೌಡ ಕೊಡನಾಗೂರ, ಅಬ್ದುಲಮಜೀದ್ ಮಕಾನದಾರ್, ಪ್ರಭುಗೌಡ ಪಾಟೀಲ, ಶಂಕರ ಮುರಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net