

ಮುದ್ದೇಬಿಹಾಳ: ನಮ್ಮ ಮನೆ ಬಿದ್ದಿವೆ, ನಮಗೆ ಮನೆ ಇಲ್ಲ, ನೋಡಬನ್ನಿ. ಪ್ರತಿ ಬಾರಿ ಬಂದಾಗಲೂ ಹಿಂದಿನವರು ಓಟು ಕೇಳಿಕೊಂಡು ಹೋಗಿಬಿಡುತ್ತಾರೆ. ನೀವಾದರೂ ನಮಗೆ ಮನೆ ಕೊಡುವ ಕೆಲಸ ಮಾಡಿ ಎಂದು ತಾಲೂಕಿನ ಹಂದ್ರಾಳ ಗ್ರಾಮದ ವಸತಿ ರಹಿತ ಮಹಿಳೆಯರು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಲ್ಲಿ ಕೈ ಮುಗಿದು ಬೇಡಿಕೊಂಡರು. ತಾಲೂಕಿನ ಹಂದ್ರಾಳ ಗ್ರಾಮದ ಮರಗಮ್ಮ ದೇವಸ್ಥಾನದ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ತೆರಳುತ್ತಿದ್ದ ಶಾಸಕರನ್ನು ತಡೆದು ನಿಲ್ಲಿಸಿದ ಗ್ರಾಮದ ವೃದ್ಧೆಯರು ತಮಗೆ ಇರಲು ಮನೆ ಇಲ್ಲ. ಮನೆ ಕಟ್ಟಿಸಿಕೊಡಲು ವಿನಂತಿಸಿದರಲ್ಲದೆ, ನೀವು ಹೇಳಿ ಹೋಗಬೇಡಿ ನಮ್ಮ ಕೆಲಸ ಮಾಡಿಕೊಡಿ ಎಂದು ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಶಾಸಕರು ತಮ್ಮ ಆಪ್ತ ಸಹಾಯಕ ಬಸನಗೌಡ ಪಾಟೀಲ ನಡಹಳ್ಳಿ ಅವರಿಗೆ ತಿಳಿಸಿ, ವಸತಿ ರಹಿತ ಮಹಿಳೆಯರ ಹೆಸರುಗಳನ್ನು ಪಟ್ಟಿ ಮಾಡಿಕೊಳ್ಳಲು ತಿಳಿಸಿದರು. ಮುದ್ದೇಬಿಹಾಳ ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ ಗ್ರಾಮದ ಮಹಿಳೆಯರ ನೆರವಿಗೆ ನಿಂತರು. ಮುಖಂಡ ಬಾಬುಗೌಡ ಪಾಟೀಲ, ಮಂಜುಳಾ ಮೇಟಿ ಮತ್ತಿತರರು ಇದ್ದರು.
ಹಂದ್ರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆಯನ್ನು ಪರಿಶೀಲನೆ ಮಾಡಿದ ಶಾಸಕ ನಡಹಳ್ಳಿ, ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಿಡಬ್ಲೂೃಡಿ ಎಇಇ ಆರ್.ಎಂ. ಹುಂಡೇಕಾರ, ಎಇ ಅಶೋಕ ಬಿರಾದಾರ, ಭೂಸೇನಾ ನಿಗಮದ ಎಇಇ ಎಸ್. ಮಹೇಶ್ವರಿ ಇದ್ದರು.