

ಮುದ್ದೇಬಿಹಾಳ: ಹೆರಿಗೆ ಬಳಿಕ ತೀವ್ರ ರಕ್ತಸ್ರಾವ ತಡೆಗಟ್ಟುವುದಕ್ಕಾಗಿ ಬಾಣಂತಿಯೊಬ್ಬರ ದೇಹದೊಳಗೇ ಬ್ಯಾಂಡೇಜ್ ಬಟ್ಟೆಯನ್ನು ಆರು ತಿಂಗಳು ಹೊರ ತೆಗೆಯದೇ ಹಾಗೆ ಬಿಟ್ಟಿದ್ದರಿಂದ ವಿಪರೀತ ನೋವು ಕಾಣಿಸಿಕೊಂಡು ತಮ್ಮ ಮಗಳ ಜೀವಕ್ಕೆ ಆಪತ್ತು ಎದುರಾಗಿತ್ತು ಎಂದು ಬಾಣಂತಿ ಸಂಬಂಧಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರ ಹಾಗೂ ನರ್ಸ್‌ಗಳ ವಿರುದ್ಧ ಆರೋಪಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಮಹಿಬೂಬ್ ನಗರದ ನಿವಾಸಿ, ಹಾಲಿ ಸಿಂದಗಿ ತಾಲೂಕಿನ ಅಸಾಂತಾಪುರ ಮೂಲದ ಶಾಹೀನ್ ಲಾಲಸಾಬ್ ಉತ್ನಾಳ ಅವರಿಗೆ ಜೂ.7 ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಆಗಿತ್ತು.
ಹೆರಿಗೆ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆಗದಂತೆ ವೈದ್ಯರು ಮಹಿಳೆಯ ದೇಹದಲ್ಲಿ ಡ್ರೆಸಿಂಗ್ ಬಟ್ಟೆಯನ್ನು ಇರಿಸಿ ರಕ್ತಸ್ರಾವ ತಡೆದಿದ್ದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ ಆ ಬಟ್ಟೆಯನ್ನು ತೆಗೆಯದೆ ಹಾಗೆ ಕಳಿಸಿಕೊಟ್ಟಿದ್ದರು ಎನ್ನಲಾಗಿದೆ.
ಕಳೆದ ಐದಾರು ದಿನಗಳ ಹಿಂದೆ ಬಾಣಂತಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಬಂದಾಗ ಮಹಿಳೆಯ ದೇಹದಲ್ಲಿ ಇರಿಸಿದ್ದ ಬಟ್ಟೆ ತೆಗೆಯದಿರುವುದೇ ಮಹಿಳೆಯ ಹೊಟ್ಟೆ ನೋವಿಗೆ ಕಾರಣ ಎಂಬುದು ವೈದ್ಯರಿಗೆ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಯ ವೈದ್ಯರು ಆ ಬಟ್ಟೆಯನ್ನು ತೆಗೆದು ಬಾಣಂತಿಯ ಜೀವ ಉಳಿಸಿದ್ದಾರೆ.
ಬಾಣಂತಿ ಶಾಹೀನ್ ಉತ್ನಾಳ, ಆಕೆಯ ತಾಯಿ ಚಾಂದಬಿ ಜೇವರ್ಗಿ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮಗಳಿಗೆ ಹೆರಿಗೆ ಬಳಿಕ ರಕ್ತಸ್ರಾವ ಆಗದಂತೆ ಬಳಸಿದ್ದ ಬಟ್ಟೆಯನ್ನು ತೆಗೆಯದೇ ಹಾಗೆ ಬಿಡಲಾಗಿತ್ತು. ಆಗ ಸಮಸ್ಯೆ ಆಗಿರಲಿಲ್ಲ. ಎರಡ್ಮೂರು ತಿಂಗಳ ಬಳಿಕ ಸ್ವಲ್ಪ ಸಮಸ್ಯೆ ಎದುರಾದಾಗ ಬೇರೆ ಖಾಸಗಿ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದೇವು. ಕಳೆದ ಎಂಟತ್ತು ದಿನಗಳ ಹಿಂದೆ ಮಗಳಿಗೆ ಮತ್ತೆ ಹೆಚ್ಚಿನ ತೊಂದರೆ ಕಾಣಿಸಿಕೊಂಡಿತು. ನಾವು ಅನಕ್ಷರಸ್ಥರಿದ್ದು, ಮಗಳಿಗೆ ತೊಂದರೆ ಆಗಿದ್ದ ಬಗ್ಗೆ ಗೊತ್ತಾಗಲಿಲ್ಲ. ಹೆಚ್ಚು ಒತ್ತಾಯ ಮಾಡಿದಾಗ ಮಗಳು ಹೆರಿಗೆ ಸಂದರ್ಭದಲ್ಲಿ ಇರಿಸಿದ್ದ ಬ್ಯಾಂಡೆಜ್ ಬಟ್ಟೆಯನ್ನು ತೆಗೆದು ತೋರಿಸಿದ್ದಾಳೆ. ಇದರಿಂದ ಗಾಬರಿಯಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಚಿಕಿತ್ಸೆ ನೀಡಿ ಬಟ್ಟೆ ತೆಗೆದಿದ್ದಾರೆ. ಈಗ ಮಗಳು ಚೇತರಿಸಿಕೊಂಡಿದ್ದಾಳೆ.
ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಬಡವರ ಜೀವದ ಜತೆ ಚೆಲ್ಲಾಟವಾಡಿರುವ ವೈದ್ಯರು, ನರ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳದೇ ಉಡಾೆಯಿಂದ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಕೆಲ ನರ್ಸ್‌ಗಳೇ ವೈದ್ಯರ ತರಹ ವರ್ತನೆ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ವಿಷಯದ ಬಗ್ಗೆ ಸುದ್ದಿಗಾರರೊಂದಿಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮಾತನಾಡಿ, ಪಟ್ಟಣದ ನಿವಾಸಿ ಶಾಹೀನ್ ಉತ್ನಾಳ ಅವರು ನ. 23 ರಂದು ನಮ್ಮ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ಆರೋಗ್ಯ ತಪಾಸಣೆಗೆ ಬಂದಿದ್ದು, ಅಂದು ತಪಾಸಣೆ ಮಾಡಿದಾಗ ಅವರ ದೇಹದಲ್ಲಿ ಪ್ಯಾಡ್ ಮಾದರಿಯ ಬಟ್ಟೆ ಕಂಡು ಬಂದಿದೆ. ಆ ಪ್ಯಾಡ್ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ಯಾಡ್ ಎಂದು ಆಪಾದಿಸಿದ್ದು, ಅವರ ಆರೋಪ ಸಂಶಯಾಸ್ಪದವಾಗಿದ್ದು, ತಜ್ಞರ ಸಮಿತಿ ರಚಿಸಿ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಾಣಂತಿಗೆ ಚಿಕಿತ್ಸೆ ನೀಡಿ ದೇಹದಲ್ಲಿದ್ದ ಬಟ್ಟೆ ಹೊರ ತೆಗೆದ ಬಳಿಕ ಅದನ್ನು ನಾಶಪಡಿಸುವ ಮೂಲಕ ಸಾಕ್ಷಿ ನಾಶಕ್ಕೆ ಯತ್ನಿಸಲಾಗಿದೆ ಎಂಬ ಆರೋಪಗಳು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕೇಳಿ ಬಂದಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಲಾಗಿದ್ದು, ಆಗ ಸಾಕ್ಷಿಯ ಅಗತ್ಯತೆ ಇರುತ್ತದೆ. ಮಹಿಳೆಯ ದೇಹದಲ್ಲಿ ಬಿಟ್ಟಿದ್ದ ಬಟ್ಟೆಯನ್ನು ಆರು ತಿಂಗಳವರೆಗೆ ಅಲ್ಲಿಯೇ ಬಿಡಲಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳಿಸಿ ವರದಿ ತರಿಸಿಕೊಳ್ಳಬೇಕಾಗುತ್ತದೆ. ಆದರೆ, ಸದ್ಯಕ್ಕೆ ಆ ಬಟ್ಟೆಯನ್ನು ನಾಶ ಮಾಡಲಾಗಿದೆ ಎಂಬ ಆರೋಪಗಳನ್ನು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಬಾಣಂತಿ ಸಹೋದರ ಹುಸೇನ್ ಜೇವರಗಿ ಆರೋಪಿಸಿದ್ದಾರೆ.