ಗೂಡ್ಸ್ ಲಾರಿ ಮಾಲೀಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು

MBL 28-1
Published on

ಮುದ್ದೇಬಿಹಾಳ: ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಗೂಡ್ಸ್ ವಾಹನ ನಿಲುಗಡೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ ಗೂಡ್ಸ್ ವಾಹನ ಚಾಲಕನೊಬ್ಬನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಮುದ್ದೇಬಿಹಾಳದಲ್ಲಿ ಹುಬ್ಬಳ್ಳಿ-ಮುದ್ದೇಬಿಹಾಳ ಮಾರ್ಗದಲ್ಲಿ ಸರಕು ಸಾಗಾಟ ಮಾಡುವ ವಾಹನದ ಮಾಲೀಕ ಮಹೇಶ ಹಿಕ್ಕಿಮಠ ಎಂಬಾತ ತನ್ನ ಗೂಡ್ಸ್ ವಾಹನದಲ್ಲಿ ಸರಕು ತುಂಬಿಕೊಂಡು ಅಂಗಡಿಯೊಂದಕ್ಕೆ ಅನ್‌ಲೋಡ್ ಮಾಡಲು ಮುಂದಾಗಿದ್ದ. ಗೂಡ್ಸ್ ವಾಹನ ಚಾಲಕ ರಸ್ತೆಯ ಮಧ್ಯೆಯೇ ವಾಹನವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರಿಂದ ಜನರ ಓಡಾಟಕ್ಕೆ ತೊಂದರೆಯಾಯಿತು. ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪಿಎಸ್‌ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಗೂಡ್ಸ್ ವಾಹನದ ಮಾಲೀಕ ಮಹೇಶ ಹಿಕ್ಕಿಮಠ ಎಂಬಾತನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಮೂರು ಸಾವಿರ ರೂ. ದಂಡ ಹಾಕಿದ್ದಾರೆ.

ಪರದಾಡಿದ ಸವಾರರು

ಪಟ್ಟಣದ ಮುಖ್ಯರಸ್ತೆಯಲ್ಲಿ ಎರಡು ಕಡೆಗಳಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ಎಲ್ಲೆಂದರಲ್ಲಿ ಬೈಕ್ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳು ಸಂಚರಿಸಲು ಅಸಾಧ್ಯವಾಗುತ್ತಿದೆ. ಇನ್ನೂ ಬೈಕ್‌ಗಳು ಸಂಚರಿಸುವುದು ದೂರದ ಮಾತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಕಾಬಿಟ್ಟಿಯಾಗಿ ಗೂಡ್ಸ್ ವಾಹನ ಮಾಲೀಕರು ಯಾವುದೇ ಟ್ರಾಫಿಕ್ ರೂಲ್ಸ್‌ಗಳಿಗೆ ಬೆಲೆ ನೀಡದೆ ತಮಗೆ ತಿಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಗೆ ಕಡಿವಾಣ ವಿಧಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗಬೇಕಿದೆ ಎಂಬ ಮಾತುಗಳು ಕೇಳಿ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net