ಮುದ್ದೇಬಿಹಾಳದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ

Muddebihal, Encroachment, Police, Municipal Council, Mahiboba Golsangi,
ಮುದ್ದೇಬಿಹಾಳ ಪಟ್ಟಣದ ಜ್ಞಾನಭಾರತಿ ಶಾಲೆ ಹತ್ತಿರ ರಾಜ್ಯ ಹೆದ್ದಾರಿ ಅಕ್ಕಪಕ್ಕ ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸುತ್ತಿರುವುದು.
Published on

ಮುದ್ದೇಬಿಹಾಳ: ಪೂರ್ವನಿರ್ಧಾರದಂತೆ ಪುರಸಭೆ ವತಿಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ಪಟ್ಟಣದ ತಂಗಡಗಿ ರಸ್ತೆ, ತಾಳಿಕೋಟೆ ಬೈಪಾಸ್ ರಸ್ತೆ ಮತ್ತು ಪುರಸಭೆ ಹತ್ತಿರದ ರಸ್ತೆಗಳ ುಟ್‌ಪಾತ್, ಚರಂಡಿ ಅತಿಕ್ರಮಿಸಿ ಇಟ್ಟುಕೊಂಡಿದ್ದ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಿತು.

ಜೆಸಿಬಿ ಯಂತ್ರಗಳನ್ನು ಬಳಸಿ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಅವುಗಳನ್ನು ಪುರಸಭೆ ವಾಹನದಲ್ಲಿ ಬೇರೆ ಕಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿತ್ತು. ಕೆಲವೆಡೆ ಕಾರ್ಯಾಚರಣೆಗೆ ಅಡ್ಡಿಪಡಿಸುವ ಯತ್ನಗಳು ನಡೆದರೂ ಪೊಲೀಸರ ಬಂದೋಬಸ್ತ್‌ನಿಂದ ಪರಿಸ್ಥಿತಿ ತಿಳಿಗೊಂಡಿತು. ಅಧಿಕಾರಿಗಳ ಜೊತೆ ಅನುಚಿತವಾಗಿ ನಡೆದುಕೊಂಡ ಪುರಸಭೆಯ ಮಾಜಿ ಸದಸ್ಯರೊಬ್ಬರನ್ನು ಅವರ ಕುಟುಂಬದ ಇಬ್ಬರು ಸದಸ್ಯರ ಸಮೇತ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.

ಈಚೆಗೆ ಸಾರ್ವಜನಿಕರು ಪುರಸಭೆ ಎದುರು ಪ್ರತಿಭಟಿಸಿದಾಗ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ನೀಡಿದ ಲಿಖಿತ ಭರವಸೆಯನ್ವಯ ನಡೆದ ಕಾರ್ಯಾಚರಣೆ ಮಾತು ಉಳಿಸಿಕೊಂಡಂತಾಗಿತ್ತು. ಬೆಳಗ್ಗೆ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿಯ ಜ್ಞಾನಭಾರತಿ ಶಾಲೆ ಎದುರುಗಡೆಯಿಂದ ಪ್ರಾರಂಭಗೊಂಡ ಕಾರ್ಯಾಚರಣೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ತಾಳಿಕೋಟೆ ಬೈಪಾಸ್ ರಸ್ತೆಯ ಶ್ರೀಕೃಷ್ಣ ಮಂಗಲ ಕಾರ್ಯಾಲಯದವರೆಗೂ ಮುಂದುವರಿಸಲಾಯಿತು.

ಬಸವನಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ನೇತೃತ್ವ ವಹಿಸಿಕೊಂಡಿದ್ದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮುದ್ದೇಬಿಹಾಳ ಠಾಣೆ ಪಿಎಸ್‌ಐಗಳಾದ ಸಂಜಯ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ತಾಳಿಕೋಟೆ ಠಾಣೆಯ ಪಿಎಸ್‌ಐ ರಾಮನಗೌಡ ಸಂಕನಾಳ ಅವರಿಂದ ಮಾಹಿತಿ ಪಡೆದು ಮಾರ್ಗದರ್ಶನ ಮಾಡಿದರು.

ಮುದ್ದೇಬಿಹಾಳ, ತಾಳಿಕೋಟೆ ಮತ್ತು ಬಸವನಬಾಗೇವಾಡಿ ವೃತ್ತದಲ್ಲಿನ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪೊಲೀಸರು ಭದ್ರತೆ ಒದಗಿಸಿದ್ದರು. ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು ಕಾರ್ಯಾಚರಣೆ ನಡೆಸಿದರು.

ಪುರಸಭೆ ಸದಸ್ಯರು, ಪ್ರಭಾವಿಗಳು, ರಾಜಕೀಯ ಮುಖಂಡರು, ಪತ್ರಕರ್ತರೆಂದು ಹೇಳಿಕೊಳ್ಳುವವರು ಅತಿಕ್ರಮವಾಗಿ ಇಟ್ಟುಕೊಂಡಿದ್ದ ಎಲ್ಲ ಡಬ್ಬಾ ಅಂಗಡಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಲು ಅನುವು ಮಾಡಿಕೊಡಲಾಯಿತು. ಹಲವರು ಸ್ವಯಂಪ್ರೇರಣೆಯಿಂದ ಅತ್ರಿಕಮಣ ತೆರವುಗೊಳಿಸಿದರೆ ಇನ್ನೂ ಅನೇಕರ ಅಂಗಡಿಗಳು ಸಾಮಗ್ರಿ ಸಮೇತ ನೆಲಕ್ಕುರುಳಿದವು. ರಸ್ತೆಯ ಎರಡೂ ಬದಿ ಅತಿಕ್ರಮಣ ಹೆಚ್ಚಾಗಿರುವುದರಿಂದ ಸಂಚಾರ ಸಮಸ್ಯೆ ತಲೆದೋರಿ ಪಟ್ಟಣದಲ್ಲಿ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿ ಹಲವರ ಪ್ರಾಣಹಾನಿ ಆಗಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪುರಸಭೆಯ ಕಾರ್ಯಾಚರಣೆಗೆ ಹೆಚ್ಚಿನ ಆಸಕ್ತಿಯಿಂದ ಕೈಜೋಡಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net