

ಮುದ್ದೇಬಿಹಾಳ: ಪಟ್ಟಣದ ಹುಡ್ಕೋಗೆ ಹೋಗುವ ರಸ್ತೆಯಲ್ಲಿ ನಿತ್ಯವೂ ಟ್ರಾಫಿಕ್ ಸಂಚಾರದ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಕಿತ್ತೂರ ಚನ್ನಮ್ಮ ವೃತ್ತದಿಂದ ಹುಡ್ಕೋದ ಮೊದಲನೇ ಕ್ರಾಸ್‌ವರೆಗೆ ಸದ್ಯಕ್ಕೆ ಸಿಸಿ ರಸ್ತೆ ಮಾಡಲಾಗುತ್ತಿದ್ದು, ಅದರ ಕ್ಯೂರಿಂಗ್‌ದಿಂದಾಗಿ ಒಂದೇ ಬದಿಯಲ್ಲಿ ವಾಹನ ಸವಾರರು ತಿರುಗಾಡಲು ಅವಕಾಶ ಕಲ್ಪಿಸಲಾಗಿದೆ. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಿಂದ ಕೋರ್ಟ್ ಮುಂಭಾಗದವರೆಗೆ ಒಂದೇ ಕಡೆಯಲ್ಲಿ ಸಂಚರಿಸಬೇಕಿರುವ ಹಿನ್ನೆಲೆ ಕಾರುಗಳು, ಬೈಕ್ ಸವಾರರು ಒಮ್ಮೆಲೆ ತೆರಳುವಾಗ ಸಮಸ್ಯೆ ಉಂಟಾಗುತ್ತಿದೆ. ಹೊಸದಾಗಿ ಸಿಸಿ ರಸ್ತೆ ಮಾಡಿದ್ದು ಕನಿಷ್ಠ ಹತ್ತು ದಿನಗಳವರೆಗಾದರೂ ಕ್ಯೂರಿಂಗ್ ಮಾಡಬೇಕು. ಇಲ್ಲದಿದ್ದರೆ ಮಾಡಿದ ಕೂಡಲೇ ರಸ್ತೆ ಕಿತ್ತು ಹೋಯಿತು ಎಂಬ ಅಪವಾದ ನಾವು ಹೊರಬೇಕಾಗುತ್ತದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಗುತ್ತಿಗೆದಾರರು ಹೇಳುತ್ತಾರೆ.
ಹೇಮರಡ್ಡಿ ಮಲ್ಲಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ತೆರಳುವ ರಸ್ತೆ ಬದಿಯಲ್ಲಿ ಬಾಂಡ್‌ರೈಟರ್ಸ್ ಅಂಗಡಿಗಳಿದ್ದು, ಕಾಗದ ಪತ್ರಗಳನ್ನು ಮಾಡಿಸಿಕೊಳ್ಳಲು ಬರುವವರು ಬೈಕ್‌ಗಳನ್ನು ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಇದರಿಂದ ಇನ್ನುಳಿದವರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿವೆ.
ಈ ವೇಳೆ ಕೆಲ ಸಮಯದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಬೈಕ್ ಸವಾರರಿಗೆ ಬೈದು ತೆರವುಗೊಳಿಸಿದರು. ಕೆಲ ಬೈಕ್‌ಗಳ ಚಕ್ರದ ಗಾಳಿ ತೆಗೆಯಲು ಮುಂದಾದರು.
ಪಟ್ಟಣದ ಹುಡ್ಕೋಗೆ ತೆರಳುವ ರಸ್ತೆ ಪಕ್ಕದಲ್ಲಿರುವ ಬಾಂಡ್ ರೈಟರ್ಸ್ ಅಂಗಡಿ ಮುಂದೆ ರಸ್ತೆ ಮೇಲೆ ಬೈಕ್ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದ ಸವಾರನೊಂದಿಗೆ ಕಾರು ಚಾಲಕ, ಯೋಗ ಸಮಿತಿ ಮುಖಂಡ ರಾವಸಾಹೇಬ ದೇಸಾಯಿ ವಾಗ್ವಾದ ನಡೆಸಿದರು. ಎರಡು ಕಾರುಗಳು ಪರಸ್ಪರ ಎದುರು ಬದುರು ಬಂದಾಗ ಮುಂದೆ ಹೋಗಲು ಅವಕಾಶ ಇಲ್ಲದ್ದರಿಂದಾಗ ಬೈಕ್ ತೆಗೆಯುವಂತೆ ಹೇಳಿದರೂ ರಸ್ತೆ ಮೇಲೆ ನಿಲ್ಲಿಸಲು ಮುಂದಾದಾಗ ಆಕ್ರೋಶ ವ್ಯಕ್ತಪಡಿಸಿದ ಇನ್ನುಳಿದ ಸಾರ್ವಜನಿಕರು ಬೈಕ್ ಸವಾರನಿಗೆ ತರಾಟೆಗೆ ತೆಗೆದುಕೊಂಡರು.