ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ ವಿಲ ಯತ್ನ

MBL 30-1
Published on

ಮುದ್ದೇಬಿಹಾಳ: ನಾಲ್ಕು ದಿನಗಳ ಹಿಂದಷ್ಟೇ ಪಟ್ಟಣದ ಹಳೇ ಕೋರ್ಟ್ ಮುಂಭಾಗದಲ್ಲಿ ಹೊಸದಾಗಿ ಆರಂಭಗೊಂಡಿದ್ದ ಇಲ್ಲೂರ ಜ್ಯುವೆಲರಿ ಅಂಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ ಕಳ್ಳತನಕ್ಕೆ ವಿಲ ಯತ್ನ ನಡೆದಿದೆ.
ಭಾರೀ ಪ್ರಮಾಣದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದ ಕಳ್ಳರು ಜ್ಯುವೆಲರಿ ಅಂಗಡಿಯ ಶಟರ್ಸ್‌ ಗ್ರಿಲ್‌ನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಳ ನುಗ್ಗಿದ್ದಾರೆ. ಮಧ್ಯರಾತ್ರಿ ಗಸ್ತು ತಿರುಗುತ್ತಿದ್ದ ಗೂರ್ಖಾನನ್ನು ಕಳ್ಳರ ತಂಡ ಮಾತನಾಡಿಸಿದ್ದು, ಗಾಂಜಾ ಸೇವನೆ ಮಾಡುತ್ತಿಯಾ ಎಂದು ಆಮಿಷವೊಡ್ಡಿದೆ. ಗೂರ್ಖಾ ನಿರಾಕರಿಸಿ ಗಸ್ತು ಮುಂದುವರಿಸಲೆಂದು ಮುಂದೆ ಹೋದಾಗ ಅಂಗಡಿ ಕಳ್ಳತನಕ್ಕೆ ಯತ್ನಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಕೂಡಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸ್ ಎಂ.ಎಂ. ಮಠಪತಿ, ಅಣ್ಣಯ್ಯ ಬಿರಾದಾರ, ಮಲ್ಲು ದೇಸಾಯಿ ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅಂಗಡಿಕಾರ ಸುನೀಲ ಇಲ್ಲೂರ, ಚಿನ್ನಾಭರಣ ಸ್ೇ ಲಾಕರ್‌ನಲ್ಲಿ ಇಟ್ಟಿದ್ದ ಹಿನ್ನೆಲೆಯಲ್ಲಿ ಯಾವುದೇ ಚಿನ್ನಾಭರಣ ಕಳುವು ಆಗಿಲ್ಲ. ಈ ಘಟನೆ ಗೂರ್ಖಾನಿಂದ ಬೆಳಕಿಗೆ ಬಂದಿದೆ.
ಪೊಲೀಸರು ಸಕಾಲದಲ್ಲಿ ಆಗಮಿಸಿ ಕಳ್ಳತನ ಆಗದಂತೆ ತಡೆದಿದ್ದಾರೆ. ಆದರೆ, ಮೇಲಿಂದ ಮೇಲೆ ಈ ರೀತಿ ಘಟನೆಗಳು ಸಂಭವಿಸುತ್ತಿರುವುದು ಆತಂಕ, ಭಯವನ್ನುಂಟು ಮಾಡಿದೆ ಎಂದು ಹೇಳಿದರು.

ಗೂರ್ಖಾ ಶೇರ್ ಬಹಾದ್ದೂರ್ ಮಾತನಾಡಿ, ಮಧ್ಯರಾತ್ರಿ ಒಂದು ಬೈಕ್, ಕಾರಿನಲ್ಲಿ ಬಂದಿದ್ದ ಕಳ್ಳರ ತಂಡ ನನಗೆ ಗಾಂಜಾ ಸೇವನೆ ಮಾಡಲು ಕೇಳಿದರು. ನಾನು ನಿರಾಕರಿಸಿದೆ. ನೀವೇಕೆ ಇಲ್ಲಿ ಕೂತಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು ಗಾಂಜಾ ಸೇವನೆಗೆ ಕೂತಿದ್ದೇವೆ ಎಂದು ಹೇಳಿದರು. ಕೆಲ ಹೊತ್ತಿನ ಬಳಿಕ ನಾನು ನೋಡಿದಾಗ ಅಂಗಡಿಯೊಳಗೆ ಕಳುವು ಮಾಡಲು ಹೊಂಚು ಹಾಕುತ್ತಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ಅಂಗಡಿಕಾರರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು. ಘಟನಾ ಸ್ಥಳಕ್ಕೆ ಪಿಎಸ್‌ಐ ಮಲ್ಲಪ್ಪ ಮಡ್ಡಿ, ಕ್ರೈಂ ಎಸ್‌ಐ ಟಿ.ಜೆ. ನೆಲವಾಸಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಿಟಿವಿ ಕಿತ್ತೆಸೆದ ಕಳ್ಳರು

ದೊಡ್ಡ ಮಟ್ಟದಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸಿದ್ದ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಶೆಟರ್ಸ್‌ ಮುರಿದು ಅಂಗಡಿಯೊಳಕ್ಕೆ ನುಗ್ಗಿದ್ದಾರೆ. ಲ್ಲದೇ ಅಂಗಡಿಯೊಳಗೆ ಇದ್ದ ಸಿಸಿ ಕ್ಯಾಮರಾಗಳನ್ನು ಕಿತ್ತೆಸೆದಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ಇಬ್ಬರು ಕಳ್ಳರು ಅಂಗಡಿಯೊಳಗೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಂಜಾ ಹಾವಳಿ

ಪಟ್ಟಣದಲ್ಲಿ ಕೆಲವು ಪುಂಡ ಪೋಕರಿಗಳು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಸತ್ಯ ಮೊದಲ ಬಾರಿಗೆ ಬಹಿರಂಗವಾಗಿದ್ದು ಇದರಿಂದ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುವುದಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪೊಲೀಸರು ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಒತ್ತಾಯಗಳು ವ್ಯಾಪಾರಸ್ಥರಿಂದ ಕೇಳಿ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net