

ಮುದ್ದೇಬಿಹಾಳ: ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ವಾರಾಂತ್ಯದ ಕರ್ಫ್ಯೂಗೆ ನಾಗರಿಕರಿಂದ ಭಾರಿ ಸ್ಪಂದನೆ ಸಿಕ್ಕಿದೆ.
ಪಟ್ಟಣದಲ್ಲಿ ಸರ್ಕಾರದ ಆದೇಶದಂತೆ ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಯಲ್ಲಿ ಸಂಚರಿಸಿದರು. ಔಷಧ ಅಂಗಡಿ ಹೊರತುಪಡಿಸಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ ವ್ಯಾಪಾರಸ್ಥರು ಮನೆಯಲ್ಲಿಯೇ ಉಳಿದುಕೊಂಡರು. ಪಟ್ಟಣದ ಕಾಯಿಪಲ್ಯೆ ಮಾರುಕಟ್ಟೆಗೆ ತೆರಳಿದ ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಎಂ.ಬಿ.ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು, ತರಕಾರಿ ಸವಾಲನ್ನು ಪರಸ್ಪರ ಅಂತರದಲ್ಲಿ ಕೈಗೊಳ್ಳುವಂತೆ ವ್ಯಾಪಾರಸ್ಥರಿಗೆ, ರೈತರಿಗೆ ಸೂಚಿಸಿದರು.
ಸರ್ಕಾರ ನಿಗದಿಪಡಿಸಿದ್ದ ಸಮಯ ಮುಗಿಯುತ್ತಿದ್ದಂತೆ ಅಂಗಡಿಗಳನ್ನು ಬಂದ್ ಮಾಡುವಂತೆ ಸಿಪಿಐ ಅವರು ಕೈಯಲ್ಲಿ ಪೈಪ್ ಹಿಡಿದು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.ಪುರಸಭೆ ಕಂದಾಯಾಧಿಕಾರಿ ಎಂ.ಬಿ.ಮಾಡಗಿ, ಸಿಬ್ಬಂದಿ ಮಹಾಂತೇಶ ಕಟ್ಟಿಮನಿ, ಶಮ್ಸುದ್ದೀನ್ ಮೂಲಿಮನಿ, ವಿನೋದ ಝಿಂಗಾಡೆ, ಬಸವರಾಜ ಬಾಗಲಕೋಟ ಮತ್ತಿತರರು ಇದ್ದರು.
ದಂಡದ ರುಚಿ ತೋರಿಸಿದ ಅಧಿಕಾರಿಗಳು
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಿಎಸ್‌ಐ ಎಂ.ಬಿ.ಬಿರಾದಾರ ನೇತೃತ್ವದ ತಂಡ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಹಿಡಿದು ತಲಾ ನೂರು ರೂ. ದಂಡ ವಿಧಿಸಿದರು. ಈ ವೇಳೆ ಬೈಕ್ ಮೇಲೆ ತ್ರಿಬಲ್ ರೈಡ್ ಮಾಡಿದ ರೂಢಗಿ ಗ್ರಾಪಂ ಉಪಾಧ್ಯಕ್ಷನಿಗೂ ಪೊಲೀಸರು ಒಂದು ಸಾವಿರ ರೂ.ದಂಡ ಹಾಕಿದರು.
ಇತ್ತ ಬಸವೇಶ್ವರ ವೃತ್ತದಲ್ಲಿ ಸಿಪಿಐ ಆನಂದ ವಾಘಮೋಡೆ ನೇತೃತ್ವದಲ್ಲಿ ಸಿಬ್ಬಂದಿ ಮಾಸ್ಕ್ ಹಾಕದೆ ಓಡಾಡುತ್ತಿದ್ದ ಬೈಕ್ ಸವಾರರನ್ನು ಹಿಡಿದು ದಂಡ ವಿಧಿಸಿದರು. ಲಾಠಿ ಎತ್ತದೆ ಪೊಲೀಸರು ಕೆಲಸ ಮಾಡಿದ್ದು ವಿಶೇಷವಾಗಿತ್ತು. ಜನರು ಮನೆಯಲ್ಲಿಯೇ ಉಳಿದುಕೊಂಡು ಸರ್ಕಾರದ ಆದೇಶಕ್ಕೆ ಸ್ಪಂದಿಸಿದರು.
ಬಸ್ ಸಂಚಾರ ವಿರಳವಾಗಿತ್ತು. ಸೇವೆಗೆ ಸಾಕಷ್ಟು ನೌಕರರು ಬಂದಿದ್ದರೂ ಜನರೇ ಇಲ್ಲದ ಕಾರಣ ಹಲವು ಮಾರ್ಗಗಳ ಬಸ್ ಸಂಚಾರ ರದ್ದುಗೊಳಿಸಲಾಯಿತು.