

ಮುದ್ದೇಬಿಹಾಳ: 2020-21ನೇ ಸಾಲಿನ 15ನೇ ಹಣಕಾಸು ಹಾಗೂ ಇತರೆ ತಾಪಂ ಅನುದಾನ 2.03 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ತಾಪಂ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ನಿರ್ಣಯ ಕೈಗೊಂಡಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎರಡು ತಾಲೂಕು ಪಂಚಾಯಿತಿಗಳು ರಚನೆಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕಿಗೆ 1.15 ಕೋಟಿ ರೂ. ಹಾಗೂ ತಾಳಿಕೋಟೆ ತಾಲೂಕಿಗೆ 88 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕ್ರಿಯಾ ಯೋಜನೆಗೆ ತಾಪಂ ಸದಸ್ಯರು ಒಕ್ಕೂರಲಿನ ಸಮ್ಮತಿ ನೀಡಿದ್ದಾರೆ ಎಂದು ಸಭೆಯ ಬಳಿಕ ತಾಪಂ ಇಒ ಶಶಿಕಾಂತ ಶಿವಪೂರೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ 14ನೇ ಹಣಕಾಸಿನ ಅಡಿ ಹಣ ಬರಲಿಲ್ಲ. ಕೋವಿಡ್-19 ಕುರಿತಾಗಿ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ತಾಪಂ ಸದಸ್ಯರ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಸಿ ನೀಡಬಹುದಾಗಿದೆ. ಈ ಬಗ್ಗೆ ಆಯಾ ತಾಪಂ ಸದಸ್ಯರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. 2019-20ನೇ ಸಾಲಿನ ತಾಪಂ ಲೆಕ್ಕಪತ್ರಗಳಿಗೆ ಅನುಮೋದನೆ, 2020-21ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್‌ನಡಿ ಭಾಗಿಯಾದ ವಿವಿಧ ಇಲಾಖೆಗಳ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಸಲಾಯಿತು.
ತಾಪಂ ಅಧ್ಯಕ್ಷೆ ಚೆನ್ನಮ್ಮ ತಂಗಡಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ಶ್ರೀಶೈಲ ಮರೋಳ, ಪ್ರೇಮಸಿಂಗ ಚವಾಣ್, ಪಾರ್ವತಿ ಗುಡಿಮನಿ, ಕಸ್ತೂರಿಬಾಯಿ ಗುಳಬಾಳ ಮತ್ತಿತರರಿದ್ದರು.