ಮುದ್ದೇಬಿಹಾಳಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು

MUDDEBIHAL, ADDITIONAL DISTRICT COURT, MUDDEBIHAL, GOVERNMENT, STATE HIGH COURT, APPROVED, S.S.MALAGATTI,
ಮುದ್ದೇಬಿಹಾಳದಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್.
Published on

ಮುದ್ದೇಬಿಹಾಳ: ಈ ಭಾಗದ ವಕೀಲರು, ಕಕ್ಷಿದಾರರ ಬಹುದಿನಗಳ ಕನಸಾಗಿದ್ದ ಜಿಲ್ಲಾ ನ್ಯಾಯಾಲಯ ಸ್ಥಾಪನೆಯ ಬೇಡಿಕೆ ಈಡೇರಿದ್ದು, ಈ ಕುರಿತು ಸರ್ಕಾರ ರಾಜ್ಯ ಉಚ್ಚ ನ್ಯಾಯಾಲಯದ ನಿರ್ಣಯದಂತೆ ಮುದ್ದೇಬಿಹಾಳಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ (ಟು ಸಿಟ್ ಆ್ಯಟ್ ಮುದ್ದೇಬಿಹಾಳ) ವನ್ನು ಒಟ್ಟು 16 ಪೂರಕ ಸಿಬ್ಬಂದಿ, ಅಗತ್ಯ ಪೀಠೋಪಕರಣ, ಇನ್ನಿತರ ಅಗತ್ಯ ಸಾಮಗ್ರಿ ಸಮೇತ ಆರ್ಥಿಕ ಅನುಮೋದನೆಯೊಂದಿಗೆ ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಈ ಭಾಗದಲ್ಲಿ ಸಂತಸ ಮೂಡಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳು, ಸಚಿವರು ಸೇರಿ ಹಲವರು ಇಲ್ಲಿಗೆ ಬಂದಿದ್ದಾಗ ವಕೀಲರ ಸಂಘ ಮಾತ್ರವಲ್ಲದೆ ಸಾರ್ವಜನಿಕ ಸಂಘಟನೆಗಳು ಮನವಿಗಳನ್ನು ಸಲ್ಲಿಸಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯ ಅವಶ್ಯಕತೆಯ ಬೇಡಿಕೆ ಇಟ್ಟಿದ್ದವು.

ಇದಲ್ಲದೆ ವಕೀಲರ ಸಂಘದ ಹಿಂದಿನ ಮತ್ತು ಈಗಿನ ಅಧ್ಯಕ್ಷರ ನೇತೃತ್ವದ ನಿಯೋಗ, ಹಿರಿಯ ವಕೀಲರು ಸೇರಿ ಹಲವರು ಹೈಕೋರ್ಟ್ ರಿಜಿಸ್ಟ್ರಾರ್, ಕಾನೂನು ಸಚಿವರು ಸೇರಿ ಹಲವರಿಗೆ ಮನವಿ ಸಲ್ಲಿಸಿದ್ದರು. ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರಾಗಿರುವ ಸಿ.ಎಸ್.ನಾಡಗೌಡ ಸೇರಿ ಹಲವರು ಶಿಾರಸ್ಸು ಕೂಡ ಮಾಡಿದ್ದರು.

ವಕೀಲರಿಂದ ಸಂಭ್ರಮಾಚರಣೆ: ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಇಲ್ಲಿರುವ ಸುಸಜ್ಜಿತ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿ ಇಲ್ಲಿನ ಎಲ್ಲ ವಕೀಲರು ಶುಕ್ರವಾರ ನ್ಯಾಯಾಲಯ ಹೊರಗೆ ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ನಂತರ ಆದೇಶ ಪ್ರತಿಗಳನ್ನು ಮಾಧ್ಯಮದವರಿಗೆ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net