ಮುದ್ದಣನ ಮನೋರಮೆ ಯಶಸ್ವಿ ಪ್ರಯೋಗ : ಹೇಮಾವತಿ ವೀ ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸಿದ ರಂಗಶಿವ ತಂಡ

New Project (2)
Published on

ಬೆಳ್ತಂಗಡಿ: ಮುದ್ದಣ ಕವಿ ಪೌರಾಣಿಕ ಕಥಾನಕಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡಿ ನಾಟಕಗಳನ್ನು ಮತ್ತು ಯಕ್ಷಗಾನಗಳನ್ನು ರಚಿಸಿದವರು. ಅವರು ಬದುಕಿದ್ದು ಕೇವಲ 31 ವರ್ಷಗಳಾದರೂ ಅವರು ಬಿಟ್ಟುಹೋದ ಸಾಹಿತ್ಯ ಸಂಪತ್ತು ಅವರನ್ನು ಅಮರರನ್ನಾಗಿಸಿತು. ಇಂತಹ ವ್ಯಕ್ತಿಯೋರ್ವರ ದಾಂಪತ್ಯ ಜೀವನವನ್ನು ಮುಂದಿಟ್ಟುಕೊಂಡು ರಚಿಸಲಾದ ಕಲಾಕೃತಿ ’ಮುದ್ದಣನ ಮನೋರಮೆ’ ಧರ್ಮಸ್ಥಳ ಹೇಮಾವತಿ ಹೆಗ್ಗಡೆಯವರ ನಿಡುಗಾಲದ ಯೋಜನೆ. ಇಂತಹದ್ದೊಂದು ಕೃತಿಯ ಕನಸು ಅವರ ತಲೆಹೊಕ್ಕ ಎರಡು ವರ್ಷದ ಬಳಿಕ ಉಜಿರೆಯ ವನರಂಗ ಬಯಲು ರಂಗಭೂಮಿಯಲ್ಲಿ ನನಸಾಗಿ ನಾಟಕವಾಗಿ ದೃಶ್ಯ ರೂಪಕವಾಗಿ ಮೈದಳೆಯಿತು.

ನಾಟಕ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿರುವ ಹೇಮಾವತಿ ಹೆಗ್ಗಡೆಯವರ ಕಲಾತಂಡ ’ರಂಗಶಿವ ’ ಮುದ್ದಣ ನಾಟಕವನ್ನು ಯಶಸ್ವಿಯಾಗಿ ಸಾದರಪಡಿಸಿತು. ರಂಗಶಿವದ ದಶಮಾನೋತ್ಸವ ವಷರ್ದ ’ಮುದ್ದಣನ ಮನೋರಮೆ’ ನಾಟಕ ಗಂಭೀರ ಮತ್ತು ಆಂತರ್ಯವನ್ನು ಕೆದಕುವ ಪ್ರಯೋಗ. ಎಲ್ಲಿ ಎಡವಟ್ಟಾದರೂ ಕಿರಿಕಿರಿ ಎನಿಸಬಹುದು. ಹೀಗಿದ್ದರೂ ಒಟ್ಟಂದದಲ್ಲಿ ಮುದ್ದಣ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರಿಂದ ಸ್ಪಂದನೆಪಡೆಯುವಲ್ಲಿ ಸಫಲವಾಯಿತು.

ಹೇಮಾವತಿ ಹೆಗ್ಗಡೆಯವರ ಮಹಿಳಾಪರ ಚಿಂತನೆಗಳು ಮತ್ತೊಮ್ಮೆ ಈ ನಾಟಕದಲ್ಲಿಯೂ ವ್ಯಕ್ತಗೊಂಡವು. ಒಟ್ಟಾರೆಯಾಗಿ ಮುದ್ದಣನ ಕಣ್ಣುಗಳಿಂದ ಕಂಡ ರಾಮಾಶ್ವಮೇಧ ನಾಟಕ, ಹೊಸರಂಗ ಪ್ರಯೋಗದ ಸಾಧ್ಯತೆಗಳನ್ನು ಸಮರ್ಥವಾಗಿ ಸಭಿಕರ ಮುಂದೆ ತಂದು ನಿಲ್ಲಿಸಿದ್ದು ಮಾತ್ರವಲ್ಲದೆ ಪ್ರೇಕ್ಷಕರ ಒಪ್ಪುಗೆಯನ್ನೂ ಪಡಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net