

ವಿಶೇಷ ವರದಿ ತುಮಕೂರು ಪಕ್ಷದ ಹಿತಕ್ಕಾಗಿ ತಮ್ಮ ಸ್ಥಾನಗಳನ್ನು ತ್ಯಾಗ ಮಾಡಿದ್ದ ಜಿಲ್ಲೆಯ ತ್ಯಾಗರಾಜರಿಬ್ಬರು ಈಗ ರಾಜಕೀಯ ಚದುರಂಗದಾಟದಲ್ಲಿ ಮರುಹುಟ್ಟು ಪಡೆಯಲು ಹವಣಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಸಚಿವ ಸೊಗಡುಶಿವಣ್ಣ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರ ಇತ್ತೀಚಿನ ರಾಜಕೀಯ ನಿಲುವುಗಳು ಉಭಯ ಪಕ್ಷಗಳ ವರಿಷ್ಠರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 2019ರ ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಗಾಗಿ ತಾವು ಪ್ರತಿನಿಧಿಸುತ್ತಿದ್ದ ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಎಸ್.ಪಿ.ಮುದ್ದಹನುಮೇಗೌಡ ಇದೀಗ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಕೈ ಟಿಕೆಟ್‌ಗಾಗಿ ಹೈಕಮಾಂಡ್ ಮೊರೆಯಿಟ್ಟಿರುವುದು ಸ್ವಪಕ್ಷೀಯರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಅಂದು ಕಾಂಗ್ರೆಸ್ ಟಿಕೆಟ್ ತಪ್ಪಿದ ಬಳಿಕ ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದ ಎಸ್ಪಿಎಂ ಮನವೊಲಿಸಿ ಕಣದಿಂದ ಹಿಂದೆ ಸರಿಸಲಾಗಿತ್ತು. ಆಗ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದ ಎಐಸಿಸಿ ವರಿಷ್ಠ ರಾಹುಲ್‌ಗಾಂಧಿ ಮಾತಿಗೆ ತಪ್ಪಿದ್ದು ಈಗ ಇತಿಹಾಸ. 2013ರಲ್ಲಿ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಸಿಡಿದು ಬಂದು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ್ದ ಮಾಜಿ ಸಚಿವ ಸೊಗಡುಶಿವಣ್ಣಗೂ ಆಫರ್ ಕೊಟ್ಟಿದ್ದರು. ಅಂದು ಪಕ್ಷ ನಿಷ್ಠೆ ಮೆರೆದಿದ್ದ ಶಿವಣ್ಣ ಕೆಜೆಪಿ ಹೊಡೆತಕ್ಕೆ ನೆಲಕಚ್ಚಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್‌ವೈ ಮತ್ತೆ ಬಿಜೆಪಿ ಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ತಮ್ಮನ್ನು ನಂಬಿ ಕೆಜೆಪಿಗೆ ಬಂದಿದ್ದ ಜಿ.ಬಿ.ಜ್ಯೋತಿಗಣೇಶ್‌ಗೆ ಪಟ್ಟು ಹಿಡಿದು ಪಕ್ಷದ ಟಿಕೆಟ್ ಕೊಡಿಸಿದ್ದ ಯಡಿಯೂರಪ್ಪ ಗೆಲ್ಲಿಸಿಕೊಂಡಿದ್ದರು. ಅಂದು ಪಕ್ಷಕ್ಕೆ ತ್ಯಾಗ ಮಾಡಿದ್ದೆ. ಹಾಗಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿರುವುದು ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರಗಳನ್ನು ಸೃಷ್ಟಿಸಿದೆ. ಕುಣಿಗಲ್ ಕೈ ಹಿಡಿತದಲ್ಲಿದ್ದು, ಈಗಲೇ ಬಂಡಾಯದ ಕಹಳೆ ಮೊಳಗಿದೆ. ಇನ್ನು ತುಮಕೂರು ನಗರ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಿಜೆಪಿಯಲ್ಲೀಗ ‘ಸೊಗಡು’ ಕಾಡಲಾರಂಭಿಸಿದೆ. ಪಕ್ಷದ ವಿರುದ್ಧ ಸಾತ್ವಿಕ ಸಿಟ್ಟು ಹೊರಹಾಕಿರುವ ಮಾಜಿ ಸಂಸದ ಮುದ್ದಹನುಮೇಗೌಡ, ತಾವು ಮಾಡಿದ ತ್ಯಾಗಕ್ಕೆ ರಾಜಕೀಯ ಆಶ್ರಯ ಕಲ್ಪಿಸುವ ಹಲವು ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆ ಈಡೇರಿಸದ ಕಾಂಗ್ರೆಸ್ ವರಿಷ್ಠರನ್ನು ಈಗ ನಂಬುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಪಕ್ಷಕ್ಕಾಗಿ ಇಷ್ಟೆಲ್ಲ ತ್ಯಾಗ ಮಾಡಿರುವ ನನಗೆ ಕೊಡುವುದಾದರೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿ, ಇಲ್ಲದಿದ್ದರೆ ಬೇರೆ ಯಾವುದೇ ಚರ್ಚೆಗೂ ಸಿದ್ಧವಿಲ್ಲ ಎಂಬ ಸ್ಪಷ್ಟ ನಿಲುವನ್ನು ವರಿಷ್ಠರಿಗೆ ರವಾನಿಸಿದ್ದಾರೆ. ಎಸ್ಪಿಎಂ ಬಂಡಾಯದ ಬೇಗುದಿ ಕೈಗೆ ತಟ್ಟಲಿರುವುದನ್ನು ಬಲ್ಲ ಕಾಂಗ್ರೆಸ್ ವರಿಷ್ಠರು ಅದರ ಶಮನಕ್ಕೆ ಶತಾಯಗತಾಯ ಪ್ರಯತ್ನ ನಡೆಸಿರುವುದು ರಹಸ್ಯವಾಗೇನೂ ಉಳಿದಿಲ್ಲ. ಬಿಜೆಪಿ ಸಹ ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ಸೊಗಡು ಬಂಡಾಯ ಶಮನಗೊಳಿಸುವ ಅಡಕತ್ತರಿಯಲ್ಲಿ ಸಿಲುಕಿದೆ. ಪಕ್ಷದ ‘ಹಿರಿತನ’ ನಿಯಮದ ಹೊರತಾಗಿಯೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂಬ ಮಾತುಗಳನ್ನು ಬಹಿರಂಗವಾಗಿ ಹೇಳುತ್ತಿರುವ ಸೊಗಡು ಶಿವಣ್ಣ ಮನೆ, ಮನೆ ಭೇಟಿ ಆರಂಭಿಸಿರುವುದು ಕಮಲ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ಜಿಲ್ಲಾ ರಾಜಕಾರಣದಲ್ಲಿ ತಮ್ಮ ಸ್ಥಾನಗಳನ್ನು ತ್ಯಾಗಮಾಡಿರುವ ‘ತ್ಯಾಗರಾಜ’ರುಗಳ ಈ ರಾಜಕೀಯ ನಡೆಗಳು ಯಾರಿಗೆ ಲಾಭ, ನಷ್ಟವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಎಸ್ಪಿಎಂ, ಸೊಗಡು ನಿಲುವುಗಳು ಹೊಸ ಸಮೀಕರಣ, ಲೆಕ್ಕಾಚಾರಕ್ಕಂತು ಕಾರಣವಾಗಿದೆ.
ಕಾಂಗ್ರೆಸ್‌ಗೆ ಮುದ್ದಹನುಮೇಗೌಡ ಅನಿವಾರ್ಯ ! ಇತ್ತೀಚೆಗೆ ರಾಹುಲ್ ಗಾಂಧಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಕಾಣಿಸಿಕೊಳ್ಳದೆ ಎಸ್.ಪಿ.ಮುದ್ದಹನುಮೇಗೌಡ ಮುನಿಸು ಹೊರಹಾಕಿದ್ದರು. 2024ರ ಸಂಸತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಮುದ್ದಹನುಮೇಗೌಡ ಅನ್ನುವುದಂತು ಸುಸ್ಪಷ್ಟ. ಹಾಗಾಗಿ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅನಿವಾರ್ಯ. ಎಸ್ಪಿಎಂ ಮನವೊಲಿಸಲು ಪಕ್ಷದ ವರಿಷ್ಠರ ಆದೇಶವಿದ್ದರೂ ಸ್ಥಳೀಯ ಮುಖಂಡರ ಮೌನ ಮುರಿಯದೇ ಇರುವುದರ ಹಿಂದಿನ ರಾಜಕೀಯ ಲೆಕ್ಕಾಚಾರಗಳೇನು ಎಂಬುದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಕೈತಪ್ಪಿತು ಬಿಜೆಪಿಯಲ್ಲೀಗ ಗೆಲುವೊಂದೇ ಮಾನದಂಡ. ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ಗೆ ಬಿಟ್ಟು ಬೇರೆಯವರಿಗೆ ಮಣೆ ಹಾಕುವ ಸಾಹಸಕ್ಕೆ ಕೇಂದ್ರ ವರಿಷ್ಠರು ಕೈಹಾಕುವ ಸಾಧ್ಯತೆಗಳು ಕಡಿಮೆ. ಏ.1ರಂದು ಸಿದ್ಧಗಂಗಾ ಮಠಕ್ಕೆ ಅಮಿತ್ ಷಾ ಭೇಟಿ ವೇಳೆ ಮಾಜಿ ಸಚಿವ ಸೊಗಡುಶಿವಣ್ಣಗೆ ಭೇಟಿಯಾಗುವ ಅವಕಾಶ ಕೈತಪ್ಪಿ ಹೋಯಿತು. ಕಾರ್ಯಕ್ರಮ ಮುಗಿದ ಬಳಿಕ ಹೆಲಿಪ್ಯಾಡ್‌ನಲ್ಲಿ ಅಮಿತ್ ಷಾ ಬೀಳ್ಕೊಡುವ ಕಾರ್ಯಕ್ಕೆ ಶಿವಣ್ಣ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಸಮಯದ ಅಭಾವ ವಿವಿ ಗೆಸ್ಟ್ ಹೌಸ್‌ನಿಂದ ನೇರವಾಗಿ ಅಮಿತ್ ಷಾ ಕಾರು ಹೆಲಿಕ್ಯಾಪರ್ ಬಳಿಗೆ ತೆರಳಿದ್ದರಿಂದ ವರಿಷ್ಠರ ಭೇಟಿ ಅವಕಾಶ ಕೈತಪ್ಪಿತು. ಇದು ಪಕ್ಷದ ವಲಯದಲ್ಲಿ ಬೇರೆ, ಬೇರೆ ರೀತಿಯ ಚರ್ಚೆಗೆ ಆಸ್ಪದ ನೀಡಿದೆ.