

ಮಂಡ್ಯ: ಪ್ರಾಚೀನ ಕಲೆಯಾಗಿರುವ ಮೂಡಲಪಾಯ ಯಕ್ಷಗಾನ ರಾಜ್ಯದ ಹನ್ನೆರಡಕ್ಕೂ ಹೆಚ್ಚು ಜಿಲ್ಲೆಯಲ್ಲಿ ವಿಜೃಂಭಿಸಿದ ಇತಿಹಾಸವಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕರ್ನಾಟಕ ಸಂಘದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕಂಪನಿ ನಾಟಕ ಬಂದ ಬಳಿಕ ಮೂಡಲಪಾಯ ಯಕ್ಷಗಾನ ಕಡಿಮೆಯಾಯಿತು. ವಿದ್ಯಾವಂತರ ಈ ಕಲೆಗೆ ಪ್ರವೇಶ ಪಡೆಯಲಿಲ್ಲ. ಭಾಗವತರು ಸಂಶೋಧನೆ ಮಾಡಲಿಲ್ಲ. ಇದರಿಂದಾಗಿ ಕೆಲ ತಂಡ, ಭಾಗವತರು ಹಾಗೂ ಕಲಾವಿದರಷ್ಟೇ ಉಳಿದುಕೊಂಡರು ಎಂದು ವಿವರಿಸಿದರು.
ಯಕ್ಷಗಾನವೆಂದರೆ ಕರಾವಳಿ ಭಾಗದ ಕಲೆ ಎಂದುಕೊಂಡಿದ್ದೇವೆ. ಉಳಿದೆಡೆ ಇಲ್ಲವೆಂದು ಅಭಿಪ್ರಾಯಿಸಿಕೊಂಡಿದ್ದೇವೆ. ಆದರೆ ಮೂಡಲಪಾಯ ಯಕ್ಷಗಾನಕ್ಕೆ ಹಲವು ವರ್ಷದ ಇತಿಹಾಸವಿದೆ. ಕ್ರಿ.ಶ 490ರಲ್ಲಿ ಕೆಂಪಣ್ಣಗೌಡ ಎಂಬುವರು ನಾಗಮಂಗಲದ ಗ್ರಾಮವೊಂದರಲ್ಲಿ ಮೂರು ಕಾವ್ಯದ ರೂಪದಲ್ಲಿ ಪ್ರಸಂಗವನ್ನು ರಚನೆ ಮಾಡಿದರು. ಬಳಿಕ ಮೂಡಲಪಾಯ ಯಕ್ಷಗಾನವೂ ಪ್ರಾರಂಭವಾಯಿತು. ಬಳಿಕ ಮೈಸೂರಿನ ತಲಕಾಡು, ಹೆಗ್ಗಡದೇವನಕೊಟೆ, ಕೆ.ಆರ್.ನಗರ, ಕೆ.ಆರ್.ಪೇಟೆ, ಚನ್ನರಾಯಪಟ್ಟಣ, ತಿಪಟೂರು, ಗುಬ್ಬಿ, ತುರುವೇಕೆರೆ, ಶಿರಾ ಮತ್ತು ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಸೇರಿದಂತೆ 12ಕ್ಕೂ ಜಿಲ್ಲೆಯಲ್ಲಿ ವಿಜೃಂಭಿಸಿತು. ತುಮಕೂರು ಜಿಲ್ಲೆಯಲ್ಲಿ ಇಂದಿಗೂ ಕಲೆ ಉಳಿದಿಕೊಂಡಿದ್ದರೂ, ಮೂಲ ಸ್ವರೂಪ ಕಳೆದುಕೊಂಡಿದೆ ಎಂದರು.
ಈ ಹಿನ್ನೆಲೆಯಲ್ಲಿ ಮೂಡಲಪಾಯ ಯಕ್ಞಗಾನ ಕಲೆಯನ್ನು ಸಾರ್ವತ್ರಿಕಗೊಳಿಸಬೇಕಾದರೆ ಶಿಕ್ಷಣ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಇದು ಸಾಕಾರಗೊಳ್ಳಲು ಮೂರ‌್ನಾಲ್ಕು ವರ್ಷ ಬೇಕಾಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಜಯರಾಂ ರಾಯಪುರ, ಎಡಿಸಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಹಲವರು ಸಹಕಾರದೊಂದಿಗೆ ಯಕ್ಷಗಾನ ಕಲೆಯನ್ನು ಪುನರ್‌ಜೀವನಗೊಳಿಸುವ ನಿಟ್ಟಿನಲ್ಲಿ ಶಿಬಿರ ರೂಪಿಸಲಾಗಿದೆ. ಅದರಂತೆ ಶಾಲೆಗಳಿಗೆ ಹೋಗುತ್ತಿದ್ದೇವೆ. ಈ ಹಿಂದೆ ಬೇಲೂರು ಸರ್ಕಾರಿ ಶಾಲೆ ಮಕ್ಕಳಿಂದ ಒಂದು ಪ್ರಸಂಗ ಮಾಡಿಸಲಾಗಿತ್ತು. ಅದಕ್ಕೆ ಜನಮನ್ನಣೆಯೂ ಸಿಕ್ಕಿತು. ಇದರೊಂದಿಗೆ ಯಕ್ಷಗಾನ ಇತ್ತೆಂಬ ಭಾವನೆಯೂ ಬೆಳೆಯಿತು. ಹನಕೆರೆ ಶಾಲೆಯ ಮಕ್ಕಳು 30 ಪ್ರದರ್ಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳಗೆ ಮೊದಲ ಬಾರಿಗೆ ದೇವಿ ಮಹಾತ್ಮೆ ಪ್ರಸಂಗವನ್ನು ಕಲಿಸಲಾಗುತ್ತಿದೆ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಹೊಂದಿರುವಂತಹ ವ್ಯಕ್ತಿ ಪ್ರವರ್ಧನ ಮಾನಕ್ಕೆ ಬರುತ್ತಾರೆ. ಆದ್ದರಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯೂ ಮುಖ್ಯ. ಡಿಸೆಂಬರ್‌ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಅಲ್ಲಿ ವೇದಿಕೆ ಸಿಗಲಿದೆ. 25 ರಿಂದ 50 ಸಾವಿರ ಜನ ನಿಮ್ಮ ಪ್ರದರ್ಶನವನ್ನು ನೋಡುತ್ತಾರೆ. ಆದ್ದರಿಂದ ಚೆನ್ನಾಗಿ ತರಬೇತಿ ಪಡೆದುಕೊಳ್ಳಿ. ಇಡೀ ಜಿಲ್ಲೆಯಿಂದ 50 ತಂಡವನ್ನು ತಯಾರು ಮಾಡಿ ಮೂರು ದಿನ ಸಮ್ಮೇಳನದಲ್ಲಿ ಪ್ರದರ್ಶನ ಕೊಡಿಸುವಂತೆ ಮಾಡೋಣ. ನಿಮ್ಮೆಲ್ಲರಿಗೂ ಜನರಿಂದ ಪ್ರಶಂಸೆ ಸಿಗಲಿದೆ ಎಂದು ಪ್ರೋತ್ಸಾಹಿಸಿದರು.
ಮುಖ್ಯಶಿಕ್ಷಕಿ ಡಾ.ಕೆ.ಶಬಾನಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ, ಜಂಟಿ ಕಾರ್ಯದರ್ಶಿ ಪದ್ಮಾವತಿ, ಗೈಡ್ಸ್ ಆಯುಕ್ತೆ ಕೆ.ಸಿ.ನಾಗಮ್ಮ, ಸದಸ್ಯೆ ನಾಗರೇವಕ್ಕ, ಭಾಗವತ ತಲಕಾಡು ರವೀಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕ ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನಿಲಯಪಾಲಕಿ ಜ್ಯೋತಿ ಇತರರಿದ್ದರು.