

ಮೈಸೂರು: ಯಕ್ಷಗಾನ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ನೀಡಲು ರಾಜ್ಯದಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪಿಸಬೇಕು ಹಾಗೂ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹೆಚ್ಚಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್. ಬಾಲಾಜಿ ಸರ್ಕಾರವನ್ನು ಒತ್ತಾಯಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ರಾಜ್ಯ ಸಂಶೋಧಕರ ಸಂಘ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಯಾತನಹಳ್ಳಿ ಪ್ರಕಾಶ್‌ಗೆ ಸನ್ಮಾನ, ಜಿಲ್ಲಾ ಜಾನಪದ ಪ್ರಪಂಚ ಹಾಗೂ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಲಾವಿದರಿಗೆ ಕೇವಲ ಎರಡು ಸಾವಿರ ರೂ.ಮಾಸಾಶನ ನೀಡಲಾಗುತ್ತಿದ್ದು, ಇದು ಔಷಧಕ್ಕೂ ಸಾಕಾಗುವುದಿಲ್ಲ. ಮಾಸಾಶನವನ್ನು ಮೂರು ಸಾವಿರ ರೂ.ಗೆ ಹೆಚ್ಚಿಸುವ ಪ್ರಸ್ತಾವನೆ ಇದ್ದು, ಇದನ್ನು ಕನಿಷ್ಠ 5 ಸಾವಿರ ರೂ.ಗೆ ಏರಿಕೆ ಮಾಡಬೇಕು. ಇದರಿಂದ ಬಡ ಕಲಾವಿದರಿಗೆ ಅನೂಕಲವಾಗಲಿದೆ. ಕನ್ನಡ ಜಾನಪದ ಪರಿಷತ್ ವತಿಯಿಂದ ಮೆಸೂರಿನಲ್ಲಿ ರಾಜ್ಯ ಮಟ್ಟದ ಜಾನಪದ ಕಲಾವಿದರ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಎಲ್ಲ ಕಲೆ, ಸಾಹಿತ್ಯದ ಮೂಲಬೇರು ಜಾನಪದ. ಗ್ರಾಮೀಣ ಪ್ರದೇಶಗಳಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದರೆ, ಕನ್ನಡ ಜಾನಪದ ಪರಿಷತ್ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರು:
ಕೆ.ಆರ್. ನಗರದ ತಿಮ್ಮಶೆಟ್ಟಿ, ದೇವಲಾಪುರದ ಬಿಳಿಗಿರಮ್ಮ , ವರಕೋಡು ನಾಗರಾಜು, ಸಾಲುಂಡಿ ರೇವಮ್ಮ , ಹಲ್ಲರೆ ಶಿವಬುದ್ದಿ, ಹುಣಸೂರಿನ ಮಣಿ, ಮಹದೇವಪುರದ ಕೆ. ರವಿಚಂದ್ರ, ಮಾದಗಳ್ಳಿಯ ಚಿಕ್ಕತಾಯಮ್ಮ ಅವರಿಗೆ ಜಿಲ್ಲಾ ಜಾನಪದ ಪ್ರಪಂಚ ಪ್ರಶಸ್ತಿ,
ಮೈಸೂರಿನ ಕಮಲಾ ರಾಜೇಶ್, ಸುಮಂತ್ ವಶಿಷ್ಠ, ವೀಣಾ ಶಾರದಾ, ಯಾಚೇನಹಳ್ಳಿಯ ಮಹದೇವ, ಎಚ್.ಡಿ. ಕೋಟೆಯ ಆನಗಟ್ಟಿ ದೇವರಾಜ್, ಹನುಮನಪುರದ ಮಹೇಶ್, ಬೀರಂಬಳ್ಳಿಯ ಬಿ.ಎಸ್. ಅಜಯಕುಮಾರ್, ಸನ್ಯಾಸಿಪುರದ ನಾಗನಾಯಕ ಅವರಿಗೆ ಜಿಲ್ಲಾ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ನೀ. ಗಿರಿಗೌಡ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಅಪ್ಪಾಜಿಗೌಡ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಎಸ್. ಕುಮಾರ್, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಜಂಟಿ ಕಾರ್ಯದರ್ಶಿ ಡಾ.ಜಿ. ರವಿಶಂಕರ್, ವಿಭಾಗೀಯ ಸಂಚಾಲಕಿ ಡಾ.ಕಾವೇರಿ ಪ್ರಕಾಶ್, ಗುಂಡ್ಲುಪೇಟೆ ದಂತವೈದ್ಯ ಡಾ.ಸಿ. ಹರೀಶ್, ಕಾಂಗ್ರೆಸ್ ಮುಖಂಡ ಸುಂದರರಾಜ್, ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ, ಮೈಸೂರು ವಿಶ್ವ ವಿದ್ಯಾಲಯದ ಸಂಶೋಧಕರ ಸಂಘದ ಅಧ್ಯಕ್ಷ ಸಿ. ಮಹೇಶ್, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಮೆಸೂರು ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷೆ ಪಿ. ರಾಜೇಶ್ವರಿ ಹಾಗೂ ಇತರರು ಇದ್ದರು.