

ಮೈಸೂರು: ಮೈಸೂರು ತಾಲೂಕು ವರಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಹುಂಡಿಯಲ್ಲಿ ಶನಿವಾರ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದ ಉದ್ಭವ ಮಾದೇಶ್ವರ ದೇವಾಲಯದ ಬಳಿ ಪ್ರತ್ಯಕ್ಷವಾದ ಹುಲಿ ಹಾಡ ಹಗಲೇ ನಡುರಸ್ತೆಯಲ್ಲೇ ಓಡಾಡುತ್ತಿರುವುದನ್ನು ಗ್ರಾಮಸ್ಥರು ಪ್ರತ್ಯಕ್ಷ ಕಂಡಿದ್ದಾರೆ. ಹುಲಿ ಓಡಾಟವನ್ನು ವಾಹನ ಸವಾರರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಎನ್.ಬಸವರಾಜ, ಮೈಸೂರು ಉಪ ವಿಭಾಗದ ಎಸಿಎಫ್ ಎನ್.ಲಕ್ಷ್ಮೀಕಾಂತ್, ಮೈಸೂರು ವಲಯದ ಆರ್‌ಎಫ್‌ಓ ಕೆ. ಸುರೇಂದ್ರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹುಲಿ ಕಾರ್ಯಾಚರಣೆಗಾಗಿ ಚಿರತೆ ಕಾರ್ಯಪಡೆ ಸಿಬ್ಬಂದಿ ಮತ್ತು ಮೈಸೂರು ವಲಯ ಸಿಬ್ಬಂದಿಗಳಿಂದ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ ಡ್ರೋಣ್ ಕ್ಯಾಮರಾದಿಂದ ಹುಲಿಯ ಚಲನ ವಲನ ಪರಿಶೀಲಿಸಲಾಗುತ್ತಿದೆ.
ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು:
ಹುಲಿಯ ಚಲನ-ವಲನಗಳನ್ನು ಗಮನಿಸಲು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ವಾಹನ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.
ಕಾಡಂಚಿನಲ್ಲಿರುವ ವರಕೋಡು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಒಂದು ವಿಶೇಷ ತಂಡವನ್ನು ನಿಯೋಜಿಸಿ ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ರಾತ್ರಿ ಮತ್ತು ನಸುಕಿನ ವೇಳೆಯಲ್ಲಿ ಅನಗತ್ಯವಾಗಿ ಓಡಾಡದಂತೆ ಸಾರ್ವಜನಿಕ ಪ್ರಚಾರ ವ್ಯವಸ್ಥೆಯ ಮೂಲಕ ತಿಳಿಸಲಾಗಿದೆ. ಅಲ್ಲದೇ ಕರಪತ್ರಗಳನ್ನು ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ಹುಲಿ ಕಾಣಿಸಿಕೊಂಡಿರುವ ವರಕೋಡು ಮೀಸಲು ಅರಣ್ಯದ ಗ್ರಾಮಗಳ ಜನರು ರಾತ್ರಿವೇಳೆ ಒಡಾಡದಂತೆ, ಅನವಶ್ಯಕ ವದಂತಿಗಳಿಗೆ ಭಯಬೀತರಾಗದಂತೆ ಹುಲಿ ಕಾರ್ಯಾಚರಣೆ ಮುಗಿಯುವವರೆಗೆ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.