

ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್ ಹೇಳಿಕೆ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಮುದಗಲ್: ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂದು ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್ ಹೇಳಿದರು.
ಪಟ್ಟಣದ ಶ್ರೀ ಜ್ಞಾನಪ್ಪಯ್ಯ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತ್ರೋತ್ಸವದಲ್ಲಿ ಕ್ರೀಡೆಗಳನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪವಾಡ ಪುರುಷ ಶ್ರೀ ಜ್ಞಾನಪ್ಪಯ್ಯನ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ಟಗರಿನ ಕಾಳಗ, ಗುಂಡು ಎತ್ತುವ ಸ್ಪರ್ಧೆ ಏರ್ಪಡಿಸುತ್ತಿರುವದು ಶ್ಲಾಘನಿಯ ಎಂದರು.
ಎಪಿಎಂಸಿ ನಿರ್ದೇಶಕ ಹುಲ್ಲೇಶ ಸಾಹುಕಾರ ಮಾತನಾಡಿ, ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ. ಪ್ರತಿಭೆಗಳಿಗೆ ತೀರ್ಪುಗಾರರು ನ್ಯಾಯ ಕಲ್ಪಿಸಬೇಕು ಎಂದರು. ಪಂದ್ಯಾವಳಿಗೆ ಗುತ್ತಿಗೆದಾರ ಕರಿಯಪ್ಪ ಡಿ.ವಜ್ಜಲ್ ಚಾಲನೆ ನೀಡಿದರು.