ಸರ್ಕಾರದ ಮೇಲೆ ಒತ್ತಡ ಅನಿವಾರ್ಯ

Mudagal ex minister Amaregowda bayyapur
ಅಮರೇಗೌಡ ಪಾಟೀಲ್ ಬಯ್ಯಪುರ
Published on

ಮುದಗಲ್: ಪಟ್ಟಣದ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರಕ್ಕೆ ಮೇಲಿಂದ ಮೇಲೆ ಒತ್ತಡ ಹಾಕುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಕುಡಿವ ನೀರಿನ ಯೋಜನೆ ಕಾಮಗಾರಿಗೆ ಅನುದಾನ ಬಿಡುಗಡೆ ಕೋರಿ ಇತ್ತೀಚೆಗೆ ಎಂಎಲ್ಸಿ ಶರಣಗೌಡ ಬಯ್ಯಪುರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಭೈರತಿ ಸುರೇಶಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇಷ್ಟು ಸಾಲದು. ಸರ್ಕಾರದ ಮೇಲೆ ಜನಪ್ರತಿನಿಧಿಗಳು, ರಾಜಕಾರಣಿಗಳು, ಪುರಸಭೆ ಆಡಳಿತ ಮಂಡಳಿ, ಪಟ್ಟಣದ ಸಂಘ-ಸಂಸ್ಥೆಗಳು ಪದೇಪದೆ ಒತ್ತಡ ಹಾಕುವುದು ಅನಿವಾರ್ಯ ಎಂದರು.

ಮುದಗಲ್ ಕುಡಿವ ನೀರಿನ ಯೋಜನೆಗಾಗಿ ಬಾಕಿ ಅನುದಾನ 44.79 ಕೋಟಿ ರೂ. ಮೊತ್ತದ ಅಂದಾಜು ಪತ್ರಿಕೆ ಸಲ್ಲಿಸಿ ಟೆಂಡರ್ ಪ್ರಕ್ರಿಯೆಗಾಗಿ ಹಣಕಾಸು ನೆರವು ಕೋರಿದ್ದು, ಸಿಎಂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಹಾಗಂತ ಮೌನವಹಿಸಿದರೆ ಸಮಸ್ಯೆ ಇನ್ನೂ ಉಲ್ಬಣಿಸುವುದರಲ್ಲಿ ಎರಡು ಮಾತಿಲ್ಲ ಎಂದು ಸ್ಥಳೀಯ ರಾಜಕೀಯ ಮುಖಂಡರಿಗೆ ಎಚ್ಚರಿಕೆ ಸಂದೇಶ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರದ ಮೇಲೆ ಒತ್ತಡ ಹೇರಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ರಾಜಕಾರಣಿಗಳು ಸ್ವಾರ್ಥ ಬಿಟ್ಟು ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಟ್ಟಣವು ತಾಲೂಕು ಕೇಂದ್ರವಾಗಲಿ, ಕೋಟೆ ಉತ್ಸವವಾಗಲಿ ಅನೇಕ ರೀತಿಯ ಅಭಿವೃದ್ಧಿಗೆ ಹೋರಾಟಗಳು ಅನಿವಾರ್ಯವಾಗುತ್ತದೆ. ಪದೇಪದೆ ಹೋರಾಟ, ಮುಖ್ಯಮಂತ್ರಿ, ಸಚಿವರು, ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಬೇಕೆಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಮಾತನಾಡುವವರು ಬಾಯಿ ಚಪಲಕ್ಕೆ ಮಾತ್ರ. ಕಾಂಗ್ರೆಸ್ 130 ವರ್ಷಗಳ ಇತಿಹಾಸ ಹೊಂದಿದೆ. ಸಿಎಂ ಬದಲಾವಣೆ ವಿಷಯ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಷಯ. ಸಂಸದರನ್ನು ಮುಖ್ಯಮಂತ್ರಿ ಮಾಡಿರುವ ಉದಾಹರಣೆ ನಾವು ನೋಡಿದ್ದೇವೆ. ಸರ್ಕಾರದಲ್ಲಿ ಹಣಕಾಸು ತೊಂದರೆ ಇರುವುದು ಸರ್ವೇ ಸಾಮಾನ್ಯ. ಹಲವಾರು ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಅನುಕೂಲ ನೀಡಿದೆ ಎನ್ನುವುದನ್ನು ಸ್ಮರಿಸಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್, ಪ್ರಮುಖ ಸುರೇಶ ಶೇಠ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net