

ಮುದಗಲ್: ಸಮೀಪದ ಸಜ್ಜಲಗುಡ್ಡದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ ಸಾರಿಗೆ ಬಸ್ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದ್ದರಿಂದ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಒಟ್ಟು 50 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರು ಸಾರಿಗೆ ಇಲಾಖೆಯ ಬಸ್ ಬಾಡಿಗೆ ಪಡೆದು, ಮೂರು ದಿನಗಳ ಪ್ರವಾಸಕ್ಕೆ ತೆರಳಿದ್ದರು. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಲ್ಲಿಪುರ ಸಮೀಪ ಸೋಮವಾರ ಮಧ್ಯರಾತ್ರಿ ರಸ್ತೆ ಪಕ್ಕದ ತಗ್ಗಿಗೆ ಬಸ್ ಪಲ್ಟಿಯಾಗಿದೆ. ಇದರಿಂದ ವಿದ್ಯಾರ್ಥಿಗಳಾದ ಸವಿತಾ, ಗುರುಪ್ರಸಾದ, ವಿದ್ಯಾ, ಅಮರೇಶನ ಕೈ,ಕಾಲು ಹಾಗೂ ತಲೆಗೆ ಪೆಟ್ಟಾಗಿದೆ.
ಶಿಕ್ಷಕರಾದ ಅನಿತಾಬಾಯಿ ಹಾಗೂ ಅಮರೇಶಗೂ ಗಾಯಗಳಾಗಿದ್ದು, ಸವಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ಸುದ್ದಿ ತಿಳಿದು ಸಜ್ಜಲಗುಡ್ಡದ ಶಾಲೆ ಮುಂಭಾಗ ಜಮಾಯಿಸಿದ ಪಾಲಕರು ಆತಂಕ ವ್ಯಕ್ತಪಡಿಸಿದರು. ನಂತರ ಮೊಬೈಲ್‌ನಲ್ಲಿ ಮಕ್ಕಳು ಮಾತಾಡಿದ್ದರಿಂದ ಸ್ವಲ್ಪ ನಿರಾಳರಾದರು.