ದೇವನೂರು ಕೆರೆ ಒತ್ತುವರಿಗೆ ತಡೆಯೊಡ್ಡಿದ ಮುಡಾ

Devanuru lake
Published on

ಮೈಸೂರು: ಎನ್.ಆರ್. ಮೊಹಲ್ಲಾದ ದೇವನೂರು ಕೆರೆಯ ಬಳಿಯಲ್ಲಿ ಬಡಾವಣೆಯೊಂದು ನಿರ್ಮಾಣಗೊಳ್ಳುತ್ತಿದ್ದು, ಬಡಾವಣೆಗೆ ರಸ್ತೆ ನಿರ್ಮಾಣ ಮಾಡಲು ಕೆರೆ ಒತ್ತುವರಿ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಗೆ ಬಳಸಿದ್ದ ಜೆಸಿಬಿಯನ್ನು ವಶಕ್ಕೆ ಪಡೆದು ಕಾಮಗಾರಿಗೆ ತಡೆಯೊಡ್ಡಿದರು.

ಅನುಮತಿ ಪಡೆಯದೆ ಬಡಾವಣೆಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಕೆರೆಯ ಬಫರ್ ಜೋನ್‌ಗೆ ಸೇರಿದ ಜಾಗವನ್ನು ಬಡಾವಣೆ ನಿರ್ಮಾಣಕೋಸ್ಕರ ಸಮತ್ತಟ್ಟು ಮಾಡಲಾಗಿದೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಗಿರಿಧರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉದಯಗಿರಿ ಠಾಣೆಯ ಇನ್‌ಸ್ಪೆಕ್ಟರ್ ಪಿ.ಕೆ.ರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿದರು. ‘ಕಾಮಗಾರಿ ಸ್ಥಳಕ್ಕೆ ಯಾರು ಹೋಗಬೇಡಿ’ ಎಂದು ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಒತ್ತುವರಿ ಮಾಡಿಲ್ಲ: ಕೆರೆ ಜಾಗ ಒತ್ತುವರಿ ಮಾಡಿಕೊಂಡು ರಸ್ತೆ ಹಾಗೂ ಬಡಾವಣೆ ನಿರ್ಮಾಣ ಮಾಡುತ್ತಿಲ್ಲ. ಈ ಬಗ್ಗೆ ಎಲ್ಲ ದಾಖಲೆಗಳು ಇವೆ. ಒಂದು ವೇಳೆ ಒತ್ತುವರಿಯಾದರೆ ಜಾಗ ಬಿಟ್ಟುಕೊಡುತ್ತೇವೆ ಎಂದು ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ ಬಷೀರ್ ಅಹ್ಮದ್ ಹೇಳಿದರು.

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ನಿವೇಶನದ ಮಾಲೀಕ ಹಸೀಬ್, ಜಾಗ ಒತ್ತುವರಿ ಮಾಡಿಕೊಂಡು ರಸ್ತೆ, ಬಡಾವಣೆ ನಿರ್ಮಾಣ ಮಾಡುತ್ತಿಲ್ಲ. ನಾವು ಸೈಯದ್ ಶಕೀಬುರ್ ರೆಹಮಾನ್ ಅವರಿಂದ 24 ಗುಂಟೆ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡುತ್ತಿದ್ದೇವೆ. ನಾವು ನಮ್ಮ ಜಾಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಕಾಮಗಾರಿ ಮಾಡುತ್ತಿದ್ದೇವೆ. ಸರ್ವೆ ಮಾಡಿಸಿದರೆ ಸತ್ಯಾಂಶ ತಿಳಿಯುತ್ತದೆ ಎಂದು ಸ್ಪಷ್ಟನೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. ಕೆರೆಯ ಸುತ್ತ ನಾಲ್ಕು ಅಡಿ ಜಾಗವನ್ನು ಬಿಡಬೇಕು, ಆದರೆ 4 ಅಡಿ ಜಾಗ ಬಿಟ್ಟಂತೆ ಕಾಣುತ್ತಿಲ್ಲ. ಅಲ್ಲದೆ ಭೂಮಿಯನ್ನು ಅನ್ಯಕ್ರಾಂತ ಮಾಡದೆ ನಿವೇಶನ ರಚನೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ, ಸರ್ವೇ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿ ತಂತಿಬೇಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ.ರವಿಶಂಕರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net