

ಮೈಸೂರು: ಮುಡಾ ವಿಚಾರ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆ ಯಾವುದೂ ಸಹ ನಾಡಹಬ್ಬ ದಸರಾ ಉತ್ಸವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ವೀರನಹೊಸಹಳ್ಳಿಯಲ್ಲಿ ಬುಧವಾರ ದಸರಾ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ಸಾಂಸ್ಕೃತಿಕ ಹಬ್ಬವಾ ಗಿದ್ದು, ಇದರಲ್ಲಿ ರಾಜಕೀಯ ಬೆರೆಸಬಾರದು. ದಸರಾ ಉತ್ಸವ ಅಂದರೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಎಲ್ಲ ಸಮುದಾಯದ ಜನರು ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ಆಚರಿಸುವ ಹಬ್ಬವಾಗಿದೆ. ನಮ್ಮ ಸಂಸ್ಕೃತಿ ಬಿಂಬಿಸುವ ಈ ಹಬ್ಬದಲ್ಲಿ ರಾಜಕೀಯ ತರಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರ ಅಡಳಿತ ನಡೆಸುತ್ತದೆ. ನಮಗೆ ಏಳು ಕೋಟಿ ಕನ್ನಡಿಗರು ಆಶೀರ್ವಾದ ಮಾಡಿ 136 ಸ್ಥಾನಗಳನ್ನು ನೀಡಿದ್ದಾರೆ. ಹಾಗಾಗಿ ಸರ್ಕಾರ ಅಭದ್ರಗೊಳ್ಳುವ ಸಾಧ್ಯತೆ ಇಲ್ಲ. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದು, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
‘ಆನೆ ಹೋಗುತ್ತಿರುತ್ತೆ, ನರಿಯೊಂದು ಕಾದು ಕುಳಿತಿರುತ್ತೆ, ಅದೇನೋ ಬೀಳುತ್ತೇ ಅಂತ. ಆದರೆ, ಅದು ಬೀಳುವುದಿಲ್ಲ, ಆನೆ ನಡೆಯುವುದನ್ನು ನಿಲ್ಲಿಸುವುದಿಲ್ಲ’ ಎಂದು ಪ್ರತಿಪಕ್ಷಗಳಿಗೆ ಸಚಿವ ಮಹದೇವಪ್ಪ ಮಾರ್ಮಿಕವಾಗಿ ಉತ್ತರ ನೀಡಿದರು.