

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಶುಕ್ರವಾರ ಲೋಕಾಯುಕ್ತ ತನಿಖೆ ಎದುರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯ ಸಹೋದರ ಮಲ್ಲಿಕಾರ್ಜುನಸ್ವಾಮಿಗೆ ಕೆಸರೆಯಲ್ಲಿ 3.16 ಎಕರೆ ಜಾಗ ಮಾರಾಟ ಮಾಡಿದ್ದ ಜಾಗದ ಮಾಲೀಕ ಹಾಗೂ ಪ್ರಕರಣದ 4ನೇ ಅರೋಪಿ ಜೆ.ದೇವರಾಜು, ಸಿದ್ದರಾಮಯ್ಯ ಬಾಮೈದ ಹಾಗೂ 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ ಅವರನ್ನು ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿ ಪಾರ್ವತಿಗೆ ಕೆಸರೆ ಜಾಗ ಯಾವ ರೀತಿ ದೊರೆಯಿತು ಎಂಬ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಪಾರ್ವತಿಗೆ ಸೇರಿದ ಕೆಸರೆ ಜಾಗವನ್ನು ಮುಡಾ ಭೂ ಸ್ವಾಧೀನ ಪಡಿಸಿಕೊಂಡು ದೇವನೂರು ಬಡಾವಣೆ ನಿರ್ಮಾಣ ಮಾಡಿತ್ತು. ಇದಕ್ಕೆ ಪರಿಹಾರ ರೂಪದಲ್ಲಿ ವಿಜಯನಗರ 3ನೇ ಹಂತದಲ್ಲಿ 14 ನಿವೇಶನಗಳನ್ನು ಮುಡಾ ನೀಡಲಾಗಿತ್ತು. ಪಾರ್ವತಿಗೆ ದೇವನೂರು ಬಡಾವಣೆಯಲ್ಲಿಯೇ ಪರಿಹಾರ ರೂಪದಲ್ಲಿ ಬದಲಿ ನಿವೇಶನ ನೀಡಬಹುದಿತ್ತು. ಏತಕ್ಕೆ ವಿಜಯನಗರ 3ನೇ ಹಂತದಲ್ಲಿ ನೀಡಲಾ ಯಿತು? ವಿಜಯನಗರ 3ನೇ ಹಂತದಲ್ಲಿ ನಿವೇಶನ ಪಡೆಯಲು ಪಾರ್ವತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಿಸಿದ್ದಾರೆಯೇ ಎಂಬುದು ಇದೀಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಪಾರ್ವತಿ ಅವರ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದರು.
ಪ್ರಕರಣದ 2ನೇ ಆರೋಪಿಯಾಗಿರುವ ಪಾರ್ವತಿಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಶುಕ್ರವಾರ ವಿಚಾರಣೆಗೆ ಹಾಜಗಾರುವಂತೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ವತಿ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದರು. ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಸುದೀರ್ಘವಾಗಿ ಪಾರ್ವತಿ ಅವರ ವಿಚಾರಣೆಯನ್ನು ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಎಸ್ಪಿ ಉದೇಶ್ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಪಾರ್ವತಿ ಅವರು, ಅದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.