ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ಮಂಗಳವಾರ ಮುಡಾಗೆ ಭೇಟಿ ನೀಡಿ ಅಧಿಕಾರಿಗಳ ವಿಚಾರಣೆ ನಡೆಸಿದರು.
ಮುಡಾ ಹಗರಣ ತನಿಖೆಗೆ ರಾಜ್ಯ ಸರ್ಕಾರ ನಾಲ್ಕು ತಿಂಗಳ ಹಿಂದೆ ಪಿ.ಎನ್.ದೇಸಾಯಿ ಆಯೋಗ ರಚಿಸಿತು. ಬೆಂಗಳೂರಿನಲ್ಲಿ ಆಯೋಗದ ಕೇಂದ್ರ ಕಚೇರಿ ತೆರೆದು ಅಲ್ಲಿಗೆ ಎಲ್ಲ ದಾಖಲೆಗಳನ್ನು ತರಿಸಿಕೊಂಡು ಪಿ.ಎನ್. ದೇಸಾಯಿ ತನಿಖೆ ನಡೆಸುತ್ತಿದೆ. ಈ ಆಯೋಗ ರಚನೆಯಾದ ನಂತರ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿತು. ಈ ಎರಡು ತನಿಖಾ ಸಂಸ್ಥೆಗಳು ಈಗಾಗಲೇ ಮುಡಾ ಮೇಲೆ ದಾಳಿ ನಡೆಸಿ ತನಿಖೆಗೆ ಪೂರಕವಾದ ದಾಖಲೆಗಳನ್ನು ಕಲೆ ಹಾಕಿದೆ. ಆದರೆ, ದೇಸಾಯಿ ಆಯೋಗ ರಚನೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಇದೇ ಪ್ರಥಮ ಬಾರಿಗೆ ಆಯೋಗದ ಮುಖ್ಯಸ್ಥರು ಮುಡಾಗೆ ಭೇಟಿ ನೀಡಿ ತನಿಖೆಗೆ ಪೂರಕವಾಗಿ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಆದರೆ, ದೇಸಾಯಿ ಆಯೋಗ ಮುಡಾದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದು, ಇನ್ನೆರಡು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆಯೋಗ ಆಗಮನದ ಹಿನ್ನಲೆಯಲ್ಲಿ ಮುಡಾ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಆಯೋಗವು ಬೆಂಗಳೂರಿನಲ್ಲಿ ಕಚೇರಿ ತೆರೆದು ಸಾರ್ವಜನಿಕರಿಂದ ಅಗತ್ಯ ದಾಖಲೆಗಳನ್ನು ಆಹ್ವಾನಿಸಲಾಗಿತ್ತು. ಅಲ್ಲದೆ, ಮುಡಾದಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿತ್ತು. 2006ರಿಂದ 2024ರ ಜೂನ್‌ವರೆಗೆ ನಡೆದಿರುವ ನಿವೇಶನಗಳ ಹಂಚಿಕೆ, ಬದಲಿ ನಿವೇಶನಗಳ ಹಂಚಿಕೆ, ಭೂ ಪರಿಹಾರಕ್ಕೆ ಸಂಬಂಧಿಸಿದ 1 ಲಕ್ಷ ಪ್ರತಿಗಳ ದಾಖಲೆಗಳನ್ನು ಆಯೋಗ ಸಂಗ್ರಹಿಸಿದೆ. ಇದಕ್ಕೆ ಪೂರಕವಾದ ಮಾಹಿತಿಯನ್ನು ಮಂಗಳವಾರ ಆಯೋಗದ ಮುಖ್ಯಸ್ಥರಾದ ಪಿ.ಎನ್. ದೇಸಾಯಿ ಮುಡಾಗೆ ಭೇಟಿ ನೀಡಿ ಪಡೆದರು. ಮುಡಾ ಆಯುಕ್ತ ರಘುನಂದನ್ ಹಾಗೂ ಅಧಿಕಾರಿಗಳು ಆಯೋಗಕ್ಕೆ ಅಗತ್ಯ ಮಾಹಿತಿ ಒದಗಿಸಿದರು.