ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಿ: ಎಚ್.ವಿಶ್ವನಾಥ್ ಆಗ್ರಹ

msyore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜತೆಗೆ, ಕೆಸರೆಯಲ್ಲಿರುವ 3.16 ಎಕರೆ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದವರು ಸರ್ಕಾರಕ್ಕೆ ವಾಪಸ್ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.


ಮುಡಾ ಕಚೇರಿ ಆವರಣದ ಬಯಲಿನಲ್ಲೇ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾದಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ನಡೆದಿದೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರಿಗೆಲ್ಲ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ 65 ಕೋಟಿ ರೂ. ಪರಿಹಾರ ಏಕೆ ಕೇಳುತ್ತಿದ್ದಾರೆ? ಸಮಾಜವಾದಿ ಮತ್ತು ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರಿಗೆ ದುಡ್ಡು ಮತ್ತು ಮಣ್ಣಿನ ಮೇಲೆ ಆಸೆ ಇದೆಯೇ? ಸಮಾಜವಾದಿ ಮನಸ್ಸಿನ ನೀವು ಏಕೆ ಬದಲಾಗಿದ್ದೀರಿ ಎಂದು ಕುಟುಕಿದರು.


ದಲಿತರಿಗೆ ಸೇರಿದ ಜಮೀನನ್ನು ಸಿದ್ದರಾಮಯ್ಯ ಅವರ ಬಾಮೈದ ಖರೀದಿಸಿದ್ದಾರೆ. ದಲಿತರ ಭೂಮಿ ಖರೀದಿಸಲು ಸರ್ಕಾರದ ಅನುಮತಿ ಪಡೆದಿದ್ದಾರೆಯೇ? ಡಿನೋಟಿಫೈ ಆಗಿರುವ ಜಮೀನನ್ನು ಕಬಳಿಸಲಾಗಿದೆ. ಸಿದ್ದರಾಮನಹುಂಡಿಯಿಂದ ಬಂದ ಸಿದ್ದರಾಮಯ್ಯ ಅವರಿಗೆ ಏನೂ ಇಲ್ಲವೇ? ಪರಿಹಾರ ಏಕೆ ಕೇಳಬೇಕು ಎಂದು ಪ್ರಶ್ನಿಸಿದರು.


ಕೆಸರೆಯಲ್ಲಿರುವ 3.16 ಎಕರೆ ಜಮೀನನ್ನು ವಿಶೇಷ ಮಕ್ಕಳ ಶಾಲೆ, ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹಸ್ತಾಂತರಿಸಬೇಕು. ಮುಖ್ಯಮಂತ್ರಿಯಾಗಿ ಇದಕ್ಕೆ ಸಹಕಾರ ಕೊಟ್ಟರೆ ನಿಮ್ಮ ವ್ಯಕ್ತಿತ್ವವೂ ಜಾಸ್ತಿಯಾಗುತ್ತದೆ ಎಂದರು.


ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಮೂರು ಬಾರಿ ಏಕೆ ವರ್ಗಾವಣೆ ಮಾಡಿದರು? ನಮ್ಮ ಕೆಲಸ ಇನ್ನೂ ಮುಗಿದಿಲ್ಲ ಎಂದು ಉಳಿಸಿಕೊಂಡಿದ್ರಾ? ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರು 15 ಪತ್ರ ಬರೆದರೂ ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಾರ್ವಜನಿಕರಿಗೆ ಒಂದೇ ಒಂದು ನಿವೇಶನವನ್ನು ನೀಡಲಿಲ್ಲ.

ಡಿ.ದೇವರಾಜ ಅರಸು, ಇಂದಿರಾ ಗಾಂಧಿ ಸಾವಿರಾರು ಮನೆ ಕೊಟ್ಟಿದ್ದಾರೆ. ಅಕ್ಕಿ ಕೊಟ್ಟೆ, ಅಕ್ಕಿ ಕೊಟ್ಟೆ ಎಂದು ಪ್ರಚಾರ ಮಾಡುವುದು ಸಿದ್ದರಾಮಯ್ಯ ಸಾಧನೆಯೇ ಎಂದು ಲೇವಡಿ ಮಾಡಿದರು.


ಆರ್‌ಟಿಐ ಕಾರ್ಯಕರ್ತ ಗಂಗರಾಜು, ಮುಡಾ ನಿವೃತ್ತ ಯೋಜನಾ ನಿರ್ದೇಶಕ ನಟರಾಜು, ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಇದ್ದರು.

ಭೈರತಿ ಸುರೇಶ್ ರಿಯಲ್ ಎಸ್ಟೇಟ್ ಗಿರಾಕಿ


ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ ಎಂದು ಏಕ ವಚನದಲ್ಲೇ ಎಚ್. ವಿಶ್ವನಾಥ್ ಕಿಡಿಕಾರಿದರು.


ಮುಡಾ ಹಗರಣ ಹೊರಬರುತ್ತಿದ್ದಂತೆಯೇ ಹೆಲಿಕಾಪ್ಟರ್‌ನಲ್ಲಿ ಬಂದು ಪೊಲೀಸರ ಭದ್ರತೆಯಲ್ಲಿ ಸಭೆ ಮಾಡಿದ್ದಾರೆ. ನಾನು 7 ನಿವೇಶನ ಕೇಳಿದ್ದಾರೆ ಎಂದಿದ್ದಾನೆ.

ಲೇ ಸುರೇಶ ಯಾವನೋ ನೀನು? 7 ಸೈಟ್ ಕೇಳಬೇಕಾದರೆ 7 ಅರ್ಜಿ ಸಲ್ಲಿಸಬೇಕು. ಭೂ ಪರಿವರ್ತನೆ ಮತ್ತು ಅಧಿಕಾರಿಗಳ ವರ್ಗಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀಯಾ ಅಂತ ಹೇಳಬೇಕೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net