

ಮೈಸೂರು: ಕೆಸರೆಯಲ್ಲಿರುವ 3.16 ಎಕರೆ ಜಾಗವನ್ನು ಮತ್ತೊಮ್ಮೆ ಮಹಜರು ನಡೆಸಬೇಕು ಹಾಗೂ ಈ ಹಿಂದಿನ ಜಿಲ್ಲಾಧಿಕಾರಿ ಜಿ. ಕುಮಾರ್ ನಾಯಕ್‌ರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ದೂರುದಾರ ಸ್ನೇಹಮಯಿ ಕೃಷ್ಣ ಶುಕ್ರವಾರ ಲೋಕಾಯುಕ್ತಗೆ ದೂರು ನೀಡಿದ್ದಾರೆ.
ಜಾಗದ ಮಹಜರು ನಡೆಸುವ ಸಂದರ್ಭ ಗಿಡ ಗಂಟಿಗಳ ಬೆಳೆದ ಹಿನ್ನೆಲೆಯಲ್ಲಿ ರಸ್ತೆ, ಒಳಚರಂಡಿ, ಉದ್ಯಾನಗಳು ನಿರ್ಮಾಣ ಮಾಡಿರುವ ಕುರುಹುಗಳು ಸ್ಪಷ್ಟವಾಗಿ ಕಾಣಿಸಿಲ್ಲ ಹಾಗೂ ಅವುಗಳ ಫೋಟೊ, ವಿಡಿಯೋ ತೆಗೆದುಕೊಂಡಿಲ್ಲ. ಗಿಡ ಗಂಟಿ ಬೆಳೆದಿರುವ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಬಡಾವಣೆ ನಿರ್ಮಾಣವಾಗಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಮತ್ತೆ ಮಹಜರು ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
‘ದೂರು ನೀಡುವವರಿಗೆ ಕಾನೂನಿನ ಆಯಾಮಗಳ ಮಾಹಿತಿ ಇದೆಯಾ?, ಭೂ ಪರಿವರ್ತನೆ ಮಾಡಬೇಕಾದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಕಾನೂನು ಪಾಲನೆ ಮಾಡಲಾಗಿದೆ, ಯಾವುದೇ ತಪ್ಪು ಜರುಗಿಲ್ಲ’ ಎಂದು ಹಿಂದಿನ ಜಿಲ್ಲಾಧಿಕಾರಿ ಜಿ. ಕುಮಾರ್ ನಾಯಕ್ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಹಾಗಾಗಿ ಜಾಗದ ಮರು ಮಹಜರು ನಡೆಸಿ ಕುಮಾರ್ ನಾಯಕ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು ಎಂದು ದೂರಿನಲ್ಲಿ ಕೋರಿಕೊಂಡಿದ್ದಾರೆ.
ಪ್ರಶ್ನೆಗಳೇನು?: ಪಾರ್ವತಿ ಅವರ ಜಮೀನಿನಲ್ಲಿ ಕಂಡು ಬರುವ ರಸ್ತೆ, ಒಳಚರಂಡಿ, ಉದ್ಯಾನಗಳ ಫೋಟೋ ಹಾಗೂ ವಿಡಿಯೋವನ್ನು ಕುಮಾರ್ ನಾಯಕ್ ಅವರಿಗೆ ತೋರಿಸಿ, ಈ ಕುರುಹುಗಳು ಕಂಡು ಬಂದಿದ್ದರೂ ಕೃಷಿ ಭೂಮಿ ಎಂಬಂತೆ ದಾಖಲೆ ಸೃಷ್ಟಿಸಿರುವುದು ಸುಳ್ಳು ದಾಖಲೆ ಸೃಷ್ಟಿಸಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಬೇಕು ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಸದರಿ ಭೂಮಿಯನ್ನು 1998ರಲ್ಲಿ ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂಬುದು ಗೊತ್ತಿದ್ದರೂ ಸದರಿ ಜಮೀನಿನಲ್ಲಿ ಯಾವಾಗ ಬಡಾವಣೆ ನಿರ್ಮಾಣದ ಕೆಲಸಗಳನ್ನು ಮಾಡಲಾಗಿದೆ? ಬಡಾವಣೆ ರಚನೆ ಮಾಡಿದ ನಂತರ ಅನ್ಯಕ್ರಾಂತ ಆದೇಶ ಮಾಡುವವರೆಗೆ ನಿವೇಶನಗಳನ್ನು ಮಾರಾಟ ಮಾಡಿ ಕ್ರಯಪತ್ರಗಳನ್ನು ನೋಂದಣಿ ಮಾಡಲಾಗಿದೆಯೇ? 3.16 ಎಕರೆ ಜಾಗದಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಿ 2003 ರಿಂದ 2005ರ ಅವಧಿಯಲ್ಲಿ 12 ನಿವೇಶನಗಳನ್ನು ಮಾರಾಟ ಮಾಡಿ ಸಂಬಂಧಿಸಿದವರಿಗೆ ಕ್ರಯಪತ್ರ ನೀಡಲಾಗಿದೆ. ಹೀಗಿರುವಾಗ 15-7-2005 ರಂದು ಅನ್ಯಕ್ರಾಂತ ಆದೇಶ ಮಾಡುವ ಮುನ್ನ 12 ನಿವೇಶನಗಳ ಕ್ರಯಪತ್ರಗಳನ್ನು ರದ್ದುಪಡಿಸಿ ಖರೀದಿ ದಾರರಿಂದ ನಿವೇಶನಗಳನ್ನು ಹಿಂದಕ್ಕೆ ಪಡೆಯಲಿಲ್ಲ. 12 ಜನರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿದ್ದ ಸ್ವತ್ತನ್ನು ಮಲ್ಲಿಕಾರ್ಜುನಸ್ವಾಮಿಯ ಮಾಲೀಕತ್ವ ಮತ್ತು ಸ್ವಾಧೀನದಲ್ಲಿರುವ ಸ್ವತ್ತು ಎಂದು ಪರಿಗಣಿಸಿ ಮಲ್ಲಿಕಾರ್ಜುನಸ್ವಾಮಿ ಹೆಸರಿಗೆ ಅನ್ಯಕ್ರಾಂತ ಯಾವ ಕಾನೂನಿನಲ್ಲಿ ಮಾಡಿಕೊಡಲಾಯಿತು ಎಂಬ ವಿಚಾರದ ಕುರಿತು ಕುಮಾರ್ ನಾಯಕ್ ಅವರನ್ನು ಪ್ರಶ್ನೆಗೆ ಒಳಪಡಿಸಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.