

ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಶಾಮೀಲಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಗುರುವಾರ ಮಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲೇ ಭ್ರಷ್ಟಚಾರ, ಅಧಿಕಾರ ದುರುಪಯೋಗದ ಒಂದೊಂದೆ ಪ್ರಕರಣಗಳು ಹೊರಬರುತ್ತಿವೆ. ಅಧಿಕಾರವನ್ನು ಕಾಂಗ್ರೆಸಿಗರು ದಂಧೆಯನ್ನಾಗಿಸಿದ್ದಾರೆ. ಚುನಾವಣೆಗೆ ಮುನ್ನ ನನಗೂ ಫ್ರೀಘಿ, ನಿನಗೂ ಫ್ರೀ ಎಂದಿದ್ದ ಸಿದ್ದರಾಮಯ್ಯ ಈಗ ತನ್ನ ಪತ್ನಿ ಹೆಸರಿನಲ್ಲಿ ಫ್ರೀ ಆಗಿ ಸೈಟ್ ಪಡೆದಿದ್ದಾರೆ. ಸಿಎಂ ರಾಜೀನಾಮೆಗೆ ಆಗ್ರಹಿಸಿ ಜು.12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಮುಂದಿನ ಅಧಿವೇಶನದಲ್ಲೂ ಎರಡೂ ಹಗರಣ ಬಗ್ಗೆ ಪ್ರಸ್ತಾಪಿಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದರು.
ಸಮಾಜವಾದದ ಬಗ್ಗೆ, ಭ್ರಷ್ಟಾಚಾರದ ವಿರುದ್ಧ ಭಾರಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ಸಾವಿರ ಕೋಟಿಯ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ, ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂಬುದಕ್ಕೆ ಪೂರಕವಾದ ಸ್ಪಷ್ಟ ಸಾಕ್ಷ್ಯಗಳಿವೆ. 14 ಸೈಟ್ ನನ್ನ ಹೆಂಡತಿಯ ಹೆಸರಿನಲ್ಲಿ ಪಡೆದಿದ್ದೇನೆ ಎಂದು ಸಿಎಂ ಅವರೇ ಹೇಳಿದ್ದಾರೆ. ಆಸ್ತಿ ವಿವರದಲ್ಲಿ ಮುಡಾ ಜಮೀನನ್ನು ಸಿಎಂ ನಮೂದಿಸಿಲ್ಲ. ಇದೊಂದು ರಿಯಲ್ ಎಸ್ಟೇಟ್ ದಂಧೆಯಾಗಿದೆ ಎಂದರು.
ಸಿದ್ದರಾಮಯ್ಯ ಅವರ ಪತ್ನಿಯ ಜಮೀನಿಗೆ ಎರಡು ಸೈಟ್ ಪಡೆಯಬಹುದು. ಆದರೆ, 14 ಸೈಟ್ ಏಕೆ ಪಡೆದುಕೊಂಡರು ಎಂಬುದಕ್ಕೆ ಉತ್ತರ ನೀಡಬೇಕು. ಪ್ರಕರಣವನ್ನು ಮುಚ್ಚಿಹಾಕಲು ಸಿಎಂ ಅವರಿಂದಲೇ ವ್ಯವಸ್ಥಿತ ಪ್ರಯತ್ನ ಆಗುತ್ತಿದೆ. ಸಚಿವ ಬೈರತಿ ಸುರೇಶ್ ಅವರ ಮೂಲಕ ಈ ಕಾರ್ಯ ಆಗುತ್ತಿದೆ. ಮೈಸೂರು ಡಿಸಿ ಸಹಿತ ಅಧಿಕಾರಿಗಳ ವರ್ಗಾವಣೆಯನ್ನು ಮಾಡಲಾಗುತ್ತಿದೆ ಎಂದರು.
*ಕಾಂಗ್ರೆಸ್‌ನ ಅಧಿಕಾರ ದುರುಪಯೋಗ
ಶಾಸಕ ಡಾ. ಭರತ್ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಿರುವುದು ಕಾಂಗ್ರೆಸ್‌ನ ಅಧಿಕಾರ ದುರುಪಯೋಗಕ್ಕೆ ಮತ್ತೊಂದು ಉದಾಹರಣೆ ಆಗಿದೆ. ಪ್ರತಿಭಟನೆ ವೇಳೆ ಭರತ್ ಶೆಟ್ಟಿ ಅವರ ಹೇಳಿಕೆ ಅಸಂವಿಧಾನಿಕ ರೀತಿಯಲ್ಲಿ ಇರಲಿಲ್ಲ. ರಾಹುಲ್ ಗಾಂಧಿ ಅವರು ಹಿಂದುಗಳು ಬಗ್ಗೆ ಅವಹೇಳಕಾರಿ ಮಾತನಾಡಿರುವ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.