

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊನೆಗೂ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ನೀಡಿರುವ ಆದೇಶದ ಅಧಿಕೃತ ಪ್ರತಿ ಇನ್ನಷ್ಟೇ ಸಿಎಂ ಕೈಗೆ ತಲುಪಬೇಕಿದೆ.
ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಾಹಂ ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿಯನ್ನು ಕೇಳಿದ್ದರು. ಶನಿವಾರ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಏನಿದು ಮುಡಾ ಅಕ್ರಮ ಪ್ರಕರಣ: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮುಡಾ ಸೈಟ್‌ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ದಾಖಲೆಗಳ ಜೊತೆ ಆರೋಪಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ?: ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮುಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಡಾದ 50:50 ಹಗರಣದಲ್ಲಿ ಅವರು ಸಿಎಂ ಪತ್ನಿಯು ಭಾಗಿಯಾಗಿದ್ದಾರೆ ಎಂದು ಗಂಗರಾಜು ಹೇಳಿದ್ದರು.
ಮುಡಾ ವಿರುದ್ಧದ ಆರೋಪವೇನು? : ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38ಸಾವಿರದ 284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪವಾಗಿದೆ.
ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಕುತೂಹಲ ಮೂಡಿಸಿದ್ದ ನಡೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲಾಗಿತ್ತು. ಈ ವಿಚಾರದಲ್ಲಿ ರಾಜ್ಯಪಾಲರ ನಡೆ ಕುತೂಹಲಕ್ಕೆ ಕಾರಣವಾಗಿತ್ತು.
ಈ ವಿಚಾರದ ಕುರಿತು ಚರ್ಚೆ ನಡೆಯುವಾಗಲೇ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ದೆಹಲಿಗೆ ತೆರಳಿದ್ದರು. ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಟಿ. ಜೆ. ಅಬ್ರಾಹಂ ಜುಲೈ 26ರಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮರುದಿನವೇ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು.
ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಬೇರೆ ಕಡೆ ಭೂಮಿ ಕೊಟ್ಟಿರುವುದು, 50-50 ಅನುಪಾತ ದುರ್ಬಳಕೆ ಮಾಡಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಯಾರಿಗೆಲ್ಲ ನೋಟಿಸ್?: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನ್ ರಜನೀಶ್, ಎಸಿಎಸ್ ಅತೀಕ್ಗೆ ನೋಟಿಸ್ ನೀಡಲಾಗಿದೆ. ರಾಜಭವನದಿಂದ ನೋಟಿಸ್ ರವಾನೆಯಾಗಿದೆ.
ಮುಡಾ ಪ್ರಕರಣದ ಮೂವರು ದೂರುದಾರರಾದ ಟಿಜೆಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರದೀಪ್ ಈಗಾಗಲೇ ರಾಜಭವನದಲ್ಲಿ ನೋಟಿಸ್ ಸ್ವೀಕರಿಸಿ ತೆರಳಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೊನೆಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸದ್ಯ ಸಿದ್ದರಾಮಯ್ಯನವರು ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಚುರುಕಾದ ಸಿದ್ದು ಲೀಗಲ್ ಟೀಂ : ಇಂದು 12 ಗಂಟೆಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಭರದ ಸಿದ್ಧತೆ ನಡೆಸಿದೆ ಸಿದ್ದರಾಮಯ್ಯನವರ ಕಾನೂನು ಪರಿಣಿತರ ತಂಡ. ರಾಜಕೀಯ ದುರುದ್ದೇಶದಿಂದ ಈ ಅನುಮತಿಯನ್ನು ನೀಡಲಾಗಿದೆ ಎನ್ನುವುದರ ಜೊತೆಗೆ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸಜ್ಜಾಗಿದೆ. ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.