ಮುಡಾ ಹಗರಣ: ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧಾರ

mysore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅಕ್ರಮದ ಕುರಿತು ತನಿಖೆಗೆ ರಾಜ್ಯಪಾಲರನ್ನು ಭೇಟಿಯಾಗಿ ಪ್ರಕರಣದ ತನಿಖೆಗಾಗಿ ಮನವಿ ಸಲ್ಲಿಸಲು ಮೈಸೂರು ಗ್ರಾಹಕರ ಪರಿಷತ್ ನಿರ್ಧರಿಸಿದೆ.


ಯಾದವಗಿರಿಯಲ್ಲಿ ನಡೆದ ಮೈಸೂರು ಗ್ರಾಹಕರ ಪರಿಷತ್ ಸದಸ್ಯರ ಸಭೆಯಲ್ಲಿ ಪರಿಷತ್ ಸಂಸ್ಥಾಪಕ ಸಂಚಾಲಕ ಭಾಮಿ ವಿ.ಶೆಣೈ ಮಾತನಾಡಿ, ಮುಡಾದಲ್ಲಿನ ಹಿಂದಿನಿಂದ ಆದ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆಳೆಯಬೇಕು. ಐಎಎಸ್ ಅಧಿಕಾರಿಯಾಗಿದ್ದ ವಿಜಯಭಾಸ್ಕರ್ ವರದಿ ತೆಗೆದರೆ ಇದಕ್ಕಿಂತ ಹೆಚ್ಚು ಅಕ್ರಮ ಬಯಲಿಗೆ ಬರುತ್ತದೆ. ರಾಜಕೀಯ ಪಕ್ಷದೊಂದಿಗೆ ಸೇರದೆ ಪರಿಷತ್ ಮೂಲಕವೇ ಹೋರಾಟ ಕೈಗೊಳ್ಳಬೇಕು. ಈ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರಕಿಸಬೇಕಿದೆ ಎಂದು ಹೇಳಿದರು.


ವಕೀಲ ಎಸ್.ಅರುಣ್‌ಕುಮಾರ್ ಮಾತನಾಡಿ, ಮುಡಾ ಅಧ್ಯಕ್ಷರಾಗಿದ್ದ ಜಿ.ಮಾದೇಗೌಡ ಅವರ ಆಡಳಿತ ಸಮಯದಲ್ಲಿ ನಿವೇಶನ ಹಂಚುವಾಗ ಯಾರೂ ಖರೀದಿ ಮಾಡಲು ಆಸಕ್ತಿ ತೋರಲಿಲ್ಲ. ರಿಯಲ್ ಎಸ್ಟೇಟ್ ಬೆಳೆದಂತೆ ಮುಡಾದ ಉದ್ದೇಶಗಳನ್ನು ಪೂರೈಸುವ ನೆಪದಲ್ಲಿ ಖಾಸಗಿ ಬಿಲ್ಡರ್‌ಗಳು ಮುಡಾ ಸ್ಥಾನವನ್ನು ಆಕ್ರಮಿಸಿಕೊಂಡಿದ್ದು, ಅದನ್ನು ಭೂ ಮಾಫಿಯಾ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದರು.


ಆರಂಭದಲ್ಲಿ ಜಮೀನು ನೀಡಿದವರಿಗೆ 60:40ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಈಗ 50:50 ಅನುಪಾತದಲ್ಲಿ ಹಂಚಿಕೆಯಾಗುತ್ತಿದೆ. ಇದರಲ್ಲಿ ಭೂಗಳ್ಳರು ಪಾತ್ರವಿದೆ ಎಂದು ಹೇಳಿದರು.


ದೇವನೂರು ಬಡಾವಣೆಗಾಗಿ 1998ರಲ್ಲಿ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲಿರುವ ಭೂಮಿಯನ್ನು ಮುಡಾ ಪಡೆದುಕೊಂಡಿತ್ತು. ಆದರೆ, ನಿವೇಶನ ವಿತರಿಸುವಾಗ 50:50 ಅನುಪಾತದಲ್ಲಿ 14 ನಿವೇಶನಗಳನ್ನು ನೀಡಿದ್ದು ಕಾನೂನು ಬಾಹಿರವಾಗಿದೆ. ಆ ನಿವೇಶನಗಳನ್ನು ಮುಡಾಕ್ಕೆ ವಾಪಸ್ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಬೇಕು. ಅಕ್ರಮವಾಗಿ ಪಡೆದ ನಿವೇಶನಗಳನ್ನು ಹಿರಿಯ ನಾಗರಿಕರಿಗೆ ಹಂಚುವ ಕೆಲಸ ಆಗಲಿ ಎಂದು ಒತ್ತಾಯಿಸಿದರು.


ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವುದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕೆಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.


ಮೈಗ್ರಾಪನ ಮುಖಂಡರಾದ ನಟರಾಜ್, ರವಿಶಂಕರ್, ವಿ.ಎಸ್.ಸೀತಾರಾಮ್, ಶೋಭಾ.ಎಸ್, ಓಂಕಾರಯ್ಯ, ಎಸ್.ಅರುಣ್ ಕುಮಾರ್, ಎಸ್.ಕೆ.ದಿನೇಶ್, ವಿಶ್ವನಾಥ್, ಭಾನುಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net