ವಿವಾದಿತ ಮುಡಾ ನಿವೇಶನಗಳ ಪರಭಾರೆ ತಡೆಗೆ ಮೈಸೂರು ನ್ಯಾಯಾಲಯದಲ್ಲಿ ದಾವೆ

muda case
Published on

ಮೈಸೂರು: ಮುಡಾ ಹಂಚಿಕೆ ಮಾಡಿರುವ ವಿವಾದಿತ ನಿವೇಶನಗಳನ್ನು ತನಿಖೆ ಪೂರ್ಣಗೊಂಡು ತೀರ್ಪು ಹೊರಬರುವವರೆಗೂ ಪರಭಾರೆ ಮಾಡಬಾರದು ಎಂದು ಕೋರಿ ವಕೀಲ ಎಸ್. ಅರುಣ್ ಕುಮಾರ್ ಮಂಗಳವಾರ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಮುಡಾ ಹಗರಣದ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಇದರ ವಿಚಾರಣೆ ಇನ್ನಷ್ಟೇ ನ್ಯಾಯಾಲಯದಲ್ಲಿ ಆಗಬೇಕಾ ಗಿದೆ. ನ್ಯಾಯಾಲದಲ್ಲಿ ತೀರ್ಪು ಬರಲು ಎಷ್ಟು ಸಮಯ ತೆಗೆದುಕೊಳ್ಳುವುದೋ ಯಾರಿಗೂ ತಿಳಿದಿಲ್ಲ. ಹೀಗಾಗಿ ಮುಡಾದ ಹಿಂದಿನ ಆಯುಕ್ತರಾದ ಡಿ.ಡಿ. ನಟೇಶ್ ಹಾಗೂ ಜಿ.ಟಿ. ದಿನೇಶ್ ಕುಮಾರ್ ಅವಧಿಯಲ್ಲಿ ಹಂಚಿಕೆಯಾಗಿರುವ ಯಾವುದೇ ನಿವೇಶನಗಳನ್ನು ಪರಭಾರೆ ಮಾಡಬಾರದು ಎಂದು ಮುಡಾಗೆ ನಿರ್ದೇಶನ ನೀಡಬೇಕು ಎಂದು ಅರುಣ್ ಕುಮಾರ್ ಕೋರಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅರುಣ್ ಕುಮಾರ್, ಮುಡಾದಿಂದ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ಕೆಲವರು ಮುಗ್ದರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿವಾದಿತ ನಿವೇಶನಗಳನ್ನು ಪರಭಾರೆ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದರು.

ಡಿ.ಡಿ. ನಟೇಶ್ ಹಾಗೂ ಜಿ.ಟಿ. ದಿನೇಶ್ ಕುಮಾರ್ ಅವಧಿಯಲ್ಲಿ ಎಷ್ಟು ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ? ಯಾರಿಗೆಲ್ಲ ಹಂಚಿಕೆಯಾಗಿವೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಪ್ರಕಟಿಸಿದರೆ ಜನರು ಮೋಸ ಹೋಗುವುದನ್ನು ತಪ್ಪಿಸಬಹುದು. ಈ ಇಬ್ಬರು ಆಯುಕ್ತರ ಅವಧಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ಪರಭಾರೆ ಮಾಡದಂತೆ ತಡೆಯುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮುಡಾದಲ್ಲಿ ನಿವೇಶನ ಕೋರಿ 80 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇವರುಗಳಿಗೆ ನಿವೇಶನ ನೀಡಲು ಮುಡಾ ವಿಫಲವಾಗಿದೆ. ಮುಡಾ ಜನಸಾಮಾನ್ಯರಿಗೆ ನಿವೇಶನ ಹಂಚಿಕೆ ಮಾಡಲು ಆಸಕ್ತಿಯನ್ನೇ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net