

ಆರ್.ಕೃಷ್ಣ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಬದಲಿ ನಿವೇಶನದಿಂದಾಗಿ ಉಂಟಾಗಿರುವ ಗದ್ದಲ, ಗೊಂದಲ ಗುಂಪು ಮನೆ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಮನೆ, ನಿವೇಶನ ಇಲ್ಲದವರಿಗೆ ಗುಂಪು ಮನೆ ನಿರ್ಮಿಸಿಕೊಡಲಾಗುವುದು ಎಂದು ಭಾರಿ ಪ್ರಚಾರ ಪಡೆದಿದ್ದ ಗುಂಪು ಮನೆ ಯೋಜನೆ ಮತ್ತೆ ನನೆಗುದಿಗೆ ಬಿದ್ದಂತಾಗಿದೆ.
ಭೂಮಿ ಕಳೆದುಕೊಂಡ ರೈತರಿಗೆ ಶೇ.50:50ರ ಅನುಪಾತದಲ್ಲಿ ಬದಲಿ ನಿವೇಶನ ನೀಡುವ ಸಂಬಂಧ ಎದ್ದಿರುವ ವಿವಾದ ಈಗ ರಾಜ್ಯಾದ್ಯಂತ ಸದ್ದು ಮಾಡಿದೆ. ಹೀಗಾಗಿ ಮುಡಾದಲ್ಲಿ ಯಾವುದೇ ಕಾರ್ಯಗಳನ್ನು ಮಾಡಬಾರದು ಎಂದು ಸರ್ಕಾರದ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೆ ಸಂಬಂಧಪಟ್ಟ ಕಡತಗಳನ್ನು ವಶಪಡಿಸಿಕೊಂಡು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ತನಿಖೆಗೆ ಆದೇಶಿಸಿದೆ.
ಇದರಿಂದಾಗಿ ಮುಡಾದಲ್ಲಿ ದೈನಂದಿನ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಯಾವುದೇ ಹೊಸ ಯೋಜನೆ, ನಿವೇಶನ ಹಂಚಿಕೆ, ಸಭೆಗಳನ್ನು ಸಹ ನಡೆಸಬಾರದು ಎಂದು ನಗರಾಭಿವೃದ್ಧಿ ಇಲಾಖೆ ಸುತ್ತೂಲೆ ಹೊರಡಿಸಿದೆ.
ಹೀಗಾಗಿ ಯಾವುದೇ ಯೋಜನೆಗಳು ಮುಂದುವರಿಯದೆ ಸ್ಥಗಿತಗೊಂಡಂತಾಗಿದೆ. ಬದಲಿ ನಿವೇಶನ ಹಂಚಿಕೆ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣದೆ ಗುಂಪು ಮನೆ ಯೋಜನೆಗೆ ಸ್ಪಷ್ಟ ರೂಪ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಕನಸಿನ ಯೋಜನೆ:
ಗುಂಪು ಮನೆ ನಿರ್ಮಿಸಿ ಜನರಿಗೆ ಹಂಚಿಕೆ ಮಾಡಬೇಕು ಎನ್ನುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕನಸಿನ ಯೋಜನೆ 10 ವರ್ಷ ಕಳೆದರೂ ಇನ್ನೂ ಸ್ಪಷ್ಟ ರೂಪ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಜನರಿಗೆ ನಿವೇಶನ ನೀಡುವುದು ಮುಡಾ ಜವಾಬ್ದಾರಿಯಾಗಿದ್ದರೂ ಮೈಸೂರು ಹಾಗೂ ಸುತ್ತಲ ಪ್ರದೇಶದಲ್ಲಿ ಭೂಮಿ ಬೆಲೆ ಗಗನಕ್ಕೆ ಏರಿರುವುದರಿಂದ ದುಬಾರಿ ದರದಲ್ಲಿ ಭೂಮಿ ಖರೀದಿಸಿ, ನಿವೇಶನ ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡುವುದು ಕಷ್ಟ ಸಾಧ್ಯ.
ಹೀಗಾಗಿ ನಗರದಲ್ಲಿರುವ ಮುಡಾ ಜಾಗದಲ್ಲಿಯೇ ಗುಂಪು ಮನೆಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೂರು ದೊರಕಿಸಿಕೊಡಬೇಕೆಂಬ ಪ್ರಯತ್ನ 2013ರಲ್ಲಿಯೇ ಆರಂಭವಾಯಿತು.
ಗುಂಪು ಮನೆ ಯೋಜನೆ ನಿರ್ಮಿಸುವ ಕುರಿತು ನಗರದಲ್ಲಿ ಬೇಡಿಕೆ ಸಮೀಕ್ಷೆ ನಡೆಸಿದಾಗ 35 ಸಾವಿರಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದರು. ಹೀಗಾಗಿ ಮುಡಾಗೆ ಸೇರಿದ ವಿಜಯನಗರ 2ನೇ ಹಂತದ ರಿಂಗ್‌ರಸ್ತೆ ಬಳಿ 4 ಎಕರೆ ಜಾಗದಲ್ಲಿ 2 ಬ್ಲಾಕ್‌ನಲ್ಲಿ ಒಟ್ಟು 448 ಮನೆ, ದಟ್ಟಗಳ್ಳಿಯ 3.08 ಎಕರೆ ಜಾಗದಲ್ಲಿ 2 ಬ್ಲಾಕ್‌ನಲ್ಲಿ 392 ಸೇರಿ ಒಟ್ಟು 840 ಮನೆ ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಆದರೆ ಸರ್ಕಾರದಿಂದ ಹಲವು ಸಲಹೆ, ತಿದ್ದುಪಡಿಸಿ ಬಳಿಕ ವಿಜಯನಗರ 2ನೇ ಹಂತದ ಬಳಿ ಮೊದಲ ಹಂತದ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ.
ಗುಂಪು ಮನೆಯಲ್ಲಿ ಸೋಲಾರ್ ಅಳವಡಿಸಿ ವಿದ್ಯುತ್ ಉಳಿಸುವುದು. ವಾಟರ್ ಮ್ಯಾನೇಜ್ಮೆಂಟ್, ತ್ಯಾಜ್ಯ ವಿಲೇವಾರಿಗೆ ಸೂಕ್ತ ವಿಧಾನ ಅನುಸರಿಸುವ ಉದ್ದೇಶ ಹೊಂದಲಾಗಿದೆ. ಒಂದು ಬಿಎಚ್‌ಕೆ ಮನೆಗೆ 16 ಲಕ್ಷ ರೂ., 2 ಬಿಎಚ್‌ಕೆ(5.34 ಚದರ) ಮನೆಗೆ 29 ಲಕ್ಷ ರೂ. ಹಾಗೂ 2 ಬಿಎಚ್‌ಕೆ (5.64 ಚದರ) ಮನೆಗೆ 33 ಲಕ್ಷ ರೂ. ಅಂದಾಜು ದರ ನಿಗದಿ ಪಡಿಸಲಾಗಿತ್ತು. ಒಟ್ಟಾರೆ ಎರಡು ಸಾವಿರ ಗುಂಪುಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಾಧಿಕಾರ ಹಾಕಿಕೊಂಡಿದ್ದು, ಇದಕ್ಕಾಗಿ 258 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿತ್ತು.
ಜಿಲ್ಲೆಯವರೇ ಅದ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದರಿಂದ ಯೋಜನೆ ಸುಲಭವಾಗಿ ಕಾರ್ಯಗತವಾಗುತ್ತದೆ ಎನ್ನುವ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬವೇ ಸಿಲುಕಿಕೊಂಡಿರುವ ಸನ್ನಿವೇಶದಲ್ಲಿ ಗುಂಪುಮನೆ ಯೋಜನೆ ಅನುಷ್ಠಾನಗೊಳ್ಳುವುದು ಇನ್ನಷ್ಟು ಅನುಮಾನ ಮೂಡಿಸಿದೆ.
ಗುಂಪುಮನೆ ನಿರ್ಮಿಸಲು ಜಾಗ ಇಲ್ಲ ಎಂದು ಹೇಳುವ ಮುಡಾ, ಅಧಿಕಾರಿಗಳು, ಜನಪ್ರತಿನಿಧಿಗಳು, ಬದಲಿ ನಿವೇಶನದ ಹೆಸರಿನಲ್ಲಿ ಆಯಕಟ್ಟಿನ ಜಾಗದಲ್ಲಿ ಪ್ರಭಾವಿಗಳಿಗೆ ನಿವೇಶನ ಹಂಚಿಕೆ ಮಾಡುತ್ತಿರುವುದು ಸಾಕಷ್ಟು ಟೀಕೆ, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ನಿವೇಶನ, ಮನೆಗಾಗಿ ಆಕಾಂಕ್ಷಿಗಳು ಇನ್ನಷ್ಟು ಕಾಯುತ್ತಾ ಕೂರಬೇಕಾದ ಅನಿವಾರ್ಯತೆ ಇದೆ.
ಸರ್ಕಾರರದಿಂದ ಅನುಮೋದನೆ
ಮುಡಾದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಆದೇಶವಿದ್ದು, ನಿತ್ಯದ ಕೆಲಸಗಳು ಮಾತ್ರ ನಡೆಯುತ್ತಿವೆ. ಮುಂದೆ ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಎ.ಎನ್.ರಘುನಂದನ್
ಮುಡಾ ಆಯುಕ್ತ