

ಮೈಸೂರು: ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ನಿವೇಶನ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಈ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಮುಡಾ ಆಯುಕ್ತ ಎ.ಎನ್.ರಘುನಂದನ್ ಅವರಿಗೆ ಮನವಿ ಸಲ್ಲಿಸಿದೆ.
ಮುಡಾ ಕಚೇರಿಗೆ ಆಗಮಿಸಿದ ನಿಯೋಗವು ಮುಖ್ಯಮಂತ್ರಿ ಕುಟುಂಬದ ಮೇಲೆ ಬಿಜೆಪಿ, ಜೆಡಿಎಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೈಸೂರಿನ ಮರ್ಯಾದೆ ಕಳೆಯುತ್ತಿದ್ದಾರೆ. ಜನರಲ್ಲಿ ಗೊಂದಲವೂ ಸೃಷ್ಟಿಯಾಗಿದೆ. ಆರೋಪ ಮಾಡಿರುವುದು ಸಾಮಾನ್ಯ ವ್ಯಕ್ತಿಯ ವಿರುದ್ಧವಲ್ಲ. ಮುಡಾ ಗಂಭೀರವಾಗಿ ಪರಿಗಣಿಸಿ, ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಸುಳ್ಳು ಆರೋಪ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿತು.
ಕೆಸರೆಯಲ್ಲಿದ್ದ 3.16 ಎಕರೆ ಭೂಮಿಯನ್ನು ಮುಡಾ 1997ರಲ್ಲಿ ಭೂಸ್ವಾಧೀನಪಡಿಸಿಕೊಂಡು ನೋಟಿಫಿಕೇಷನ್ ಹೊರಡಿಸಿತ್ತು. ಆದರೆ, 1998ರಲ್ಲಿ ಈ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿ ಭೂಸ್ವಾಧೀನ ಪ್ರಕ್ರಿಯೆಯಿಂದ ಮುಡಾ ಕೈಬಿಟ್ಟಿತ್ತು. ಇದರಿಂದ ಆ ಭೂಮಿಯನ್ನು 2005ರಲ್ಲಿ ಅನ್ಯಕ್ರಾಂತ (ಅಲಿನೇಷನ್) ಮಾಡಿಸಲಾಗಿತ್ತು. 2015ರಲ್ಲಿ ಈ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ (ಸಿಎಂ ಪತ್ನಿ ಪಾರ್ವತಮ್ಮ ಅವರ ಅಣ್ಣ) ಖರೀದಿಸುತ್ತಾರೆ. ನಂತರ 2020ರ ಅ.10ರಂದು ಪಾರ್ವತಮ್ಮ ಅವರಿಗೆ ಮಲ್ಲಿಕಾರ್ಜುನಸ್ವಾಮಿ ದಾನವಾಗಿ ಈ ಭೂಮಿಯನ್ನು ನೀಡಿದ್ದಾರೆ.
ಆದರೆ, ಮುಡಾ ಯಾವುದೇ ನೋಟಿಸ್ ನೀಡದೆ ಮತ್ತೆ ಕೆಸರೆಯಲ್ಲಿದ್ದ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಬಡಾವಣೆಯಾಗಿ ರೂಪಿಸಿ, 52 ನಿವೇಶನ ಮಾಡಿ ಹಂಚಿದೆ. ಆ ನಂತರವಷ್ಟೇ ಇವರಿಗೆ ಭೂಮಿ ವಶಪಡಿಕೊಂಡಿರುವುದಾಗಿ ಪತ್ರ ಬರೆದಿದೆ. ಇದಕ್ಕೆ ಪಾರ್ವತಮ್ಮ ಪ್ರತಿಯಾಗಿ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಇವರಿಗೆ ಸೇರಿದ 1,48,104 ಚ.ಅಡಿ(3.16 ಎಕರೆ) ಭೂಮಿಯನ್ನು ವಶಪಡಿಸಿಕೊಂಡ ಮುಡಾ 50:50 ಅನುಪಾತದಲ್ಲಿ 82 ಸಾವಿರ ಚ.ಅಡಿ ಜಾಗ ನೀಡಬೇಕಾಗಿತ್ತು. ಆದರೆ, 14 ನಿವೇಶನದಿಂದ 38,284 ಚ.ಅಡಿ ಕೊಟ್ಟಿದ್ದಾರೆ. ಇದಕ್ಕಾಗಿ ವಿಜಯನಗರದಲ್ಲೇ ನಿವೇಶನ ನೀಡಿ ಎಂದು ಕೇಳಿಲ್ಲ. ನಿಯಮಾನುಸಾರ ಮುಡಾ ತೀರ್ಮಾನ ಕೈಗೊಂಡು ವಿಜಯನಗರದಲ್ಲಿ ನಿವೇಶನ ನೀಡಿದೆ.
ಆದರೆ, ಇದನ್ನು ಅರಿಯದೆ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅಲ್ಲದೆ, ಕೆಸರೆಯಲ್ಲಿ ಪಡೆದ ಭೂಮಿಗೆ ವಿಜಯನಗರದಲ್ಲಿ ಏಕೆ ನಿವೇಶನ ನೀಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಸರೆ ಬಡಾವಣೆ 1992ರಲ್ಲಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಪರ್ಯಾಯವಾಗಿ ನಿವೇಶನ ನೀಡಲಾಗಿದೆ ಎಂದು ತಿಳಿಸಿತು.
ಕೆಸರೆಯಲ್ಲಿ ಮುಡಾ ವಶಪಡಿಸಿಕೊಂಡಿರುವ ಜಮೀನಿನ ಬೆಲೆ ಚ.ಅಡಿಗೆ 2 ಸಾವಿರ ರೂ.ನಂತೆ ಲೆಕ್ಕ ಹಾಕಿದರೆ 1,48,104 ಚ.ಅಡಿಗೆ 30 ಕೋಟಿ ರೂ. ಆಗುತ್ತದೆ. ವಿಜಯನಗರದಲ್ಲಿ ನೀಡಿರುವ ಸೈಟ್‌ಗೆ ಚ.ಅಡಿ 8 ಸಾವಿರ ರೂ.ನಂತೆ 14 ನಿವೇಶನಕ್ಕೆ 30 ಕೋಟಿ ರೂ.ಆಗಲಿದೆ. ಪ್ರಸ್ತುತ ಕೆಸರೆಯಲ್ಲಿ ಚ.ಅಡಿಗೆ 2,788 ರೂ. ನೋಂದಣಿ ಮೌಲ್ಯವಿದೆ.
ಇದರಿಂದ 3.16 ಎಕರೆಗೆ 43 ಕೋಟಿ ರೂ. ಆಗಲಿದೆ. ಒಂದು ವೇಳೆ ಲೋಪವಾಗಿದ್ದರೆ 3.16 ಎಕರೆ ಭೂಮಿ ವಾಪಸ್ ನೀಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮದಂತೆ ಭೂಮಿ ನೀಡಲಾಗದಿದ್ದರೆ 3 ಪಟ್ಟು ಹಣ ನೀಡಬೇಕು. ಇದರಿಂದ ವಶಪಡಿಸಿಕೊಂಡಿರುವ 3.16 ಎಕರೆ ಭೂಮಿಗೆ ಪರಿಹಾರವಾಗಿ 130 ಕೋಟಿ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.
ಇದಕ್ಕೆ ಮುಡಾ ಆಯುಕ್ತ ರಘನಂದನ್ ಪ್ರತಿಕ್ರಿಯಿಸಿ, ಮುಡಾದಲ್ಲಿ ತನಿಖೆ ನಡೆಯುತ್ತಿರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ತನಿಖೆ ಮುಗಿದ ನಂತರ ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮು ಇನ್ನಿತರರಿದ್ದರು.