ಲೋಕಾಯುಕ್ತ ತನಿಖೆ ಎದುರಿಸಿದ ಮುಡಾ ಆಯುಕ್ತ ಡಿ.ಬಿ. ನಟೇಶ್

muda natesh
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಮಂಗಳ ವಾರ ನಗರದಲ್ಲಿ ಲೋಕಾಯುಕ್ತ ತನಿಖೆ ಎದುರಿಸಿದರು. ಲೋಕಾಯುಕ್ತ ತನಿಖೆ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಸದ್ಯದ ಲ್ಲಿಯೇ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ಬದಲಿ ನಿವೇಶಗಳನ್ನು ನಟೇಶ್ ಅವಧಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟೇಶ್‌ಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ನಟೇಶ್ ಬೆಳಗ್ಗೆ ಆಟೋದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ಅವರ ಬಳಿ ದಾಖಲೆಗಳು ತುಂಬಿದ್ದ ಒಂದು ಲೆದರ್‌ಬ್ಯಾಗ್ ಇತ್ತು. ಮಾಧ್ಯಮದವರನ್ನು ಕಂಡ ಕೂಡಲೇ ನಟೇಶ್ ಸಿಡಿಮಿಡಿಗೊಂಡರು. ‘ನಾನೇನು ಇಲ್ಲಿ ಡ್ಯಾನ್ಸ್ ಮಾಡ್ತಾ ಇದ್ದೇನಾ? ಯಾಕೆ ನನ್ನ ವಿಡಿಯೋ ಮಾಡ್ತಾ ಇದ್ದೀರಾ? ಕಾಮನ್‌ಸೆನ್ಸ್ ಇಲ್ವ’ ಎಂದು ಆಕ್ರೋಶ ಹೊರ ಹಾಕಿ, ತಮ್ಮ ಬಳಿ ಇದ್ದ ಬ್ಯಾಗ್‌ಅನ್ನು ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಜೋರಾಗಿ ಎತ್ತಿ ಹಾಕಿದರು.

‘ನಾನು ಒಬ್ಬ ಅಧಿಕಾರಿ, ನನಗೂ ಒಂದು ಕುಟುಂಬ ಇದೆ. ಹಾಗಾಗಿ ಸಹಜವಾಗಿಯೇ ನನ್ನ ಮೇಲೆ ಪ್ರಕರಣದಿಂದ ಒತ್ತಡ ಇದೆ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನನ್ನ ವಿಡಿಯೋ ಚಿತ್ರೀಕರಣ ತೆಗೆದು ಏನು ಮಾಡುತ್ತೀರಾ?’ ಎಂದು ಅಸಮಾಧಾನ ಹೊರ ಹಾಕಿದರು.

ಲೋಕಾಯುಕ್ತ ವಿಚಾರಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಬಿ.ನಟೇಶ್, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಿವೇಶನಗಳನ್ನು ಯಾವ ರೀತಿ ಹಂಚಿಕೆ ಮಾಡಲಾಯಿತು ಎಂದು ಬಹಿರಂಗವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಯಾವ ಕಾಯ್ದೆಯಡಿ ನನ್ನ ಅವಧಿಯಲ್ಲಿ ನಿವೇಶನಗಳು ಹಂಚಿಕೆಯಾಯಿತು ಎಂಬ ಸತ್ಯ ತನಿಖೆಯಿಂದ ಬಯಲಿಗೆ ಬರಲಿದೆ ಎಂದು ಹೇಳಿದರು.

ನಾವು ಹಂಚಿಕೆ ಮಾಡಿರುವ ನಿವೇಶನಗಳು ಕಾನೂನು ಬದ್ಧವಾಗಿದೆಯೇ?, ಯಾವ ಕಾಯ್ದೆಯಲ್ಲಿ ಹಂಚಿಕೆ ಮಾಡಲಾಗಿದೆ? ಎಂಬ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಉತ್ತರ ನೀಡಿದ್ದೇನೆ. ಈ ವಿಚಾರ ನ್ಯಾಯಾಲಯದ ಮುಂದೆ ಬರುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸತ್ಯಾಂಶ ಬಯಲಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net