ಸಿಎಂ ಅಧಿಕಾರ ತ್ಯಾಗ ಮಾಡದೆ ಬೇರೆ ದಾರಿಯಿಲ್ಲ: ಕೋಟ

udp-12-bjp
Published on

ಉಡುಪಿ: ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಅನೇಕ ಆರೋಪಗಳನ್ನು ಮಾಡಿ ಪಾರದರ್ಶಕ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೂಡ ಸೇರಿದಂತೆ ಗಂಭೀರ ಹಗರಣಗಳ ಆರೋಪ ಕೇಳಿಬಂದಿದ್ದು, ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ತ್ಯಾಗ ಮಾಡದೆ ಬೇರೆ ದಾರಿಯಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ನಿ ಹೆಸರಿನಲ್ಲಿದ್ದ 3.26 ಎಕ್ರೆ ಜಾಗವನ್ನು ಮೂಡ ವಶಕ್ಕೆ ಪಡೆದಿದು, ಇದಕ್ಕೆ ಪರಿಹಾರವಾಗಿ ಹೆಚ್ಚೆಂದರೆ 3 ಸೈಟ್​ ಕೊಡಬಹುದಿತ್ತು. ಬದಲಾಗಿ 15 ಸೈಟ್ಗಳನ್ನು ನೀಡಿದ್ದಾರೆ. 2023ರ ಚುನಾವಣೆ ಸಂದರ್ಭ ಅಫಿದಾವಿತ್ನಲ್ಲಿ ಇದರ ಮೌಲ್ಯ 8 ಕೋಟಿ ರೂ. ಎಂಬುದಾಗಿ ಉಲ್ಲೇಖಿಸಿದ್ದು, ಇದೀಗ 62 ಕೋಟಿ ಕೊಟ್ಟರೆ ಸೈಟ್​ ವಾಪಾಸು ನೀಡುತ್ತೇನೆ ಎಂಬುದಾಗಿ ಹೇಳುತ್ತಿದ್ದಾರೆ. ಇದು ಗೊಂದಲಕ್ಕೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಸ್ಥರಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ನಿಂದ ದಲಿತರಿಗೆ ಅನ್ಯಾಯ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬುದಾಗಿ ಗುಲ್ಲೆಬ್ಬಿಸಿ ಕಾಂಗ್ರೆಸ್​ ಪ.ಜಾತಿ ಮತ್ತು ಪಂಗಡದ ಅಭ್ಯುದಯಕ್ಕೆ ಮೀಸಲಾಗಿದ್ದ 14 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಕಳೆದ ವರ್ಷ 11 ಸಾವಿರ ಕೋಟಿ ರೂ. ವಿನಿಯೋಗಿಸಿ ದಲಿತರಿಗೆ ಅನ್ಯಾಯ ಮಾಡಿದೆ. ಕೂಡಲೇ ಗ್ಯಾರೆಂಟಿ ಯೋಜನೆಗೆ ವಿನಿಯೋಗಿಸಿದ ಹಣ ಇಲಾಖೆಗೆ ವರ್ಗಾಯಿಸಬೇಕು. ಮೂಡ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ವಿಳಂಬವಾದರೆ ಅಧಿಕಾರಿಗಳ ವಿರುದ್ಧ ಕ್ರಮ
ಸಂತೆಕಟ್ಟೆ ರಾ.ಹೆದ್ದಾರಿ ಅಂಡರ್​ಪಾಸ್​ ಕಾಮಗಾರಿ ವಿಳಂಬವಾಗುತ್ತಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ನೀಡಲಾವುದು. ಅಧಿಕಾರಿಗಳು ರ್ನಿಲಕ್ಷ$್ಯ ವಹಿಸಿದರೆ ಅವರ ವಿರುದ್ಧವೂ ಸೂಕ್ತ ಕ್ರಮಕ್ಕೆ ಪತ್ರ ಬರೆಯಲಾಗುವುದು. ಅಂಬಲಪಾಡಿ ಪ್ಲೆ ಓವರ್​ಗೆ ಟೆಂಡರ್​ ಆಗಿದೆ. ಕಟಪಾಡಿ ಬಾಕಿ ಇದೆ. ಉದ್ಯಾವರ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಸರ್ವಿಸ ರೋಡ್​ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಟ್ಟಡ ದರ ಪರಿಷ್ಕರಣೆ
ಮಲ್ಪೆ-ಕರಾವಳಿ ಜಂಕ್ಷನ್​ ಚತುಷ್ಪಥ ಕಾಮಗಾರಿಗೆ ಭೂ ಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಜಾಗ ಮತ್ತು 238 ಕಟ್ಟಡಕ್ಕೆ ನಿಗದಿ ಮಾಡಿರುವ ದರ ಕಡಿಮೆಯಾಗಿದೆ ಎಂಬುದಾಗಿ ಸ್ಥಳಿಯರು ಆಕ್ಷೇಪಿಸಿದ್ದಾರೆ. ದರ ಪರಿಷ್ಕರಣೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ. ಹೀಗಾಗಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆಗೆ ವಿಲೀನಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಕರಾವಳಿ ಜಿಲ್ಲೆಯ ಮೂವರು ಸಂಸದರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಜುಲೈ 22ಕ್ಕೆ ಸಮಯ ನಿಗದಿಪಡಿಸಲಾಗಿದೆ. ವಂದೇ ಭಾರತ್​ ರೈಲು ಮುಂಬೈಗೂ ವಿಸ್ತರಿಸುವಂತೆ ಕೋರಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಉದಯ್​ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಸಂಚಾಲಕ ಶಿವಕುಮಾರ್​ ಅಂಬಲಪಾಡಿ, ಮುಖಂಡರಾದ ಗೀತಾಂಜಲಿ ಸುವರ್ಣ, ವಿಜಯಕುಮಾರ್​ ಉದ್ಯಾವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net