

ಮೈಸೂರು: ಗುಂಪು ಮನೆ ಯೋಜನೆಯಡಿ ಸಾರ್ವಜನಿಕರಿಗೆ 10 ಸಾವಿರ ಮನೆ ನಿರ್ಮಿಸಿಕೊಡಲು ಚಿಂತಿಸಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ಮುಡಾ ವತಿಯಿಂದ ನಗರದ ವಿವಿಧೆಡೆ ಕೈಗೆತ್ತಿಕೊಳ್ಳಬೇಕಾದ ಗುಂಪು ವಸತಿ ಯೋಜನೆಗಳ ಜಾಗಗಳು, ರೈತ ಸಂತೆ ಮತ್ತು ಕಿರು ಮಾರುಕಟ್ಟೆ ಸ್ಥಳಗಳನ್ನು ಸೋಮವಾರ ಪರಿವೀಕ್ಷಣೆ ಮಾಡಿ ಮಾತನಾಡಿದರು.
2012ರಲ್ಲೇ ಗುಂಪು ಮನೆಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, 240 ಮನೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ, ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಇದಕ್ಕೆ ನಾನಾ ಕಾರಣಗಳಿವೆ ಎಂದರು.
ಈ ಯೋಜನೆಯಲ್ಲಿ ನನ್ನ ಪ್ರಕಾರ ಸುಮಾರು ಹತ್ತು ಸಾವಿರ ಮನೆಗಳನ್ನು ನಿರ್ಮಿಸಿ, ಜನರಿಗೆ ಉಪಯೋಗವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಇದರೊಂದಿಗೆ ಬೇರೆ ಜಾಗಗಳನ್ನು ಪಡೆದು ನಿರ್ಮಾಣ ಮಾಡುವುದಕ್ಕೂ ಚಿಂತಿಸಲಾಗುವುದು. ಈಗಿನ ಕಾಲಕ್ಕೆ ತಕ್ಕಂತೆ ಯೋಚಿಸಿ, ಉದ್ದೇಶಿತ ಜಾಗವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬುದರನ್ನು ಅರಿತುಕೊಳ್ಳಲು ಸ್ಥಳ ಪರಿಶೀಲನೆ ಮಾಡಿದ್ದು, ಗುಂಪು ಮನೆ ಯೋಜನೆಗೆ ಒಂದು ಹೊಸ ರೂಪ ನೀಡಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಮಧ್ಯಮ ಮತ್ತು ಕೆಳಮಧ್ಯಮ ಜನರಿಗೆ ಮನೆಗಳನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ. ಈ ದೃಷ್ಟಿಕೋನದಲ್ಲಿ ಕಾಳಜಿ ವಹಿಸಿ ಮುಡಾ ಸಭೆಯಲ್ಲಿ ಅನುಮೋದನೆ ಪಡೆಯುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವೀಕ್ಷಣೆ: ಗುಂಪು ವಸತಿ ಯೋಜನೆಯ ಸ್ಥಳಗಳಾದ ಕೇರ್ಗಳ್ಳಿ, ಶಾರದಾದೇವಿನಗರ, ವಿಜಯನಗರ 4ನೇ ಹಂತ ಮತ್ತು 2ನೇ ಹಂತ, ಹೆಬ್ಬಾಳ ಹಾಗೂ ಹೆಬ್ಬಾಳದಲ್ಲಿರುವ ಕಿರು ಮಾರುಕಟ್ಟೆ, ಗೋಕುಲಂ, ದೇವನೂರು ಮತ್ತು ಅಲ್ಲಿನ ಕಿರುಮಾರುಕಟ್ಟೆ, ಸಾತಗಳ್ಳಿ, ಲಲಿತಾದ್ರಿಪುರ, ಚಿಕ್ಕಹರದನಹಳ್ಳಿಯನ್ನು ಪರಿವೀಕ್ಷಣೆ ಮಾಡಿದರು.
ಮುಡಾ ಅಧೀಕ್ಷಕ ಇಂಜಿನಿಯರ್ ಶಂಕರ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ಪಾಂಡುರಂಗ, ಸುವರ್ಣ, ಕಟ್ಟಡ ನಿರ್ವಾಹಕ ಎಲ್.ಲಕ್ಷ್ಮೀ, ಎಇಇ ರಾಘವೇಂದ್ರ, ವಲಯಾಧಿಕಾರಿಗಳಾದ ಭಾಸ್ಕರ್, ಕಿರಣ್, ಎಚ್.ಪಿ.ಶಿವಣ್ಣ, ಮೋಹನ್, ರವಿಶಂಕರ್, ನಾಗೇಶ್ ಇನ್ನಿತರರು ಹಾಜರಿದ್ದರು.