ಕೆಸರುಗದ್ದೆಯಾಟದಲ್ಲಿ ಮಿಂದೆದ್ದ ಚಿಣ್ಣರು: ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜನೆ

Mud play at Republic Central School Mandya
Published on

ಮಂಡ್ಯ: ಎತ್ತ ನೋಡಿದರೂ ಸಂತಸ, ಚಪ್ಪಾಳೆ, ಶಿಳ್ಳೆಯ ಅಬ್ಬರ, ಕ್ಷಣ ಕ್ಷಣವೂ ರೋಚಕ, ಚೀರಾಟ. ಕೊನೆಯಲ್ಲಿ ಸಾಮೂಹಿಕ ನೃತ್ಯ.

ಇದು ತಾಲೂಕಿನ ಸಿದ್ದಯ್ಯನಕೊಪ್ಪಲಿನ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೆಸರು ಗೆದ್ದೆಯಲ್ಲಿ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳು. ಪ್ರತಿ ವರ್ಷದಿಂದ ಈ ಬಾರಿಯೂ ಕೆಸರುಗದ್ದೆಯಲ್ಲಿ ಕ್ರೀಡೆ ಆಯೋಜಿಸಲಾಗಿತ್ತು. ಶಾಲೆಯ ಎದುರಿನ ಜಮೀನಿನಲ್ಲಿ ಓಟ ಹಾಗೂ ಹಗ್ಗಜಗ್ಗಾಟ ನಡೆಯಿತು.

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್‌ಕೆಜಿಯಿಂದ ಹಿಡಿದು ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಓಟದ ಸ್ಪರ್ಧೆಯನ್ನು ಪ್ರತಿ ತರಗತಿವಾರು ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ವಿಭಾಗವಾರು ನಡೆಯಿತು. ಎರಡು ಸ್ಪರ್ಧೆಗಳು ಚಿಣ್ಣರಿಗೆ ಸಕತ್ ಮನರಂಜನೆ ಕೊಟ್ಟಿತು. ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದವರಂತೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತರಿಗೆ ತರಗತಿವಾರು ಬಹುಮಾನ ನೀಡಲಾಯಿತು. ಸ್ಪರ್ಧೆಯ ಕೊನೆಯಲ್ಲಿ ಕೆಸರುಗದ್ದೆಯಲ್ಲಿಯೇ ಸಾಮೂಹಿಕ ನೃತ್ಯ ಮಾಡಲಾಯಿತು. ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಒಟ್ಟಾರೆ ಸದಾ ಓದಿನಲ್ಲಿ ಕಾಲಕಳೆಯುತ್ತಿದ್ದ ವಿದ್ಯಾರ್ಥಿಗಳು ಇಡೀ ದಿನ ಆಟೋಟದಲ್ಲಿ ಮಿಂದೆದ್ದಿದರು.

ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯ ಕೆಸರು ಗದ್ದೆಯಲ್ಲಿ ಆಟೋಟ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು. ಕೆಸರು ಗದ್ದೆಯಲ್ಲಿ ಹೊರಳಾಡಿ ಸ್ಪರ್ಧೆಗಳಲ್ಲಿ ಉತ್ಸಾಹದಾಯಕವಾಗಿ ಭಾಗವಹಿಸಿ ಸಂಗೀತಕ್ಕೂ ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದ ಕ್ಷಣ ನಿಜಕ್ಕೂ ರೋಚಕವಾಗಿತ್ತು. ಕೆಸರು ಗದ್ದೆಯಾಟದಿಂದ ದೇಹ, ಮನಸ್ಥಿತಿ ಮತ್ತು ಮೆದುಳಿನ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ. ಹೃದಯ ಮತ್ತು ರಕ್ತನಾಳಗಳನ್ನು ಬಲಪಡಿಸುತ್ತದೆ. ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಅಸ್ತಿಪಂಜರದ ಮೂಳೆಗಳನ್ನು ಬಲಪಡಿಸುತ್ತದೆ. ಮಿದುಳಿನ ಚಟುವಟಿಕೆ ಮತ್ತು ಪ್ರತಿಕ್ರಿಯೆಗಳನ್ನು ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಶಾಲೆಯ ಪ್ರಾಂಶುಪಾಲೆ ಸುನೀತಾ ರಾಜನ್, ಎಚ್‌ಒಡಿಗಳಾದ ಮಹಾಲಕ್ಷ್ಮೀ, ಲತಾ, ಶಿಕ್ಷಕಿ ಯಶಸ್ವಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net