

ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದಿಂದ ಭಾನುವಾರ ದೇವದಾನ ಗೌರಿಗಂಡಿಯಲ್ಲಿ ಕೆಸರಲ್ಲಿ ಒಂದು ದಿನ ಎಂಬ ಕೆಸರುಗದ್ದೆ ಆಟೋಟ ಸ್ಪರ್ಧೆ ನಡೆಯಿತು. ಶಾಸಕ ಟಿ.ಡಿ.ರಾಜೇಗೌಡ ಪತ್ನಿ ಪುಷ್ಪಾ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆಸರುಗದ್ದೆ ಆಟೋಟಗಳನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸುವ ಮೂಲಕ ಗ್ರಾಮೀಣ ಜನರಿಗೆ ಉತ್ತಮ ಮನೋರಂಜನೆ ನೀಡುತ್ತಿರುವುದು ಶ್ಲಾಘನೀಯ ಎಂದರು. ದೇವದಾನ ಗ್ರಾಪಂ ಅಧ್ಯಕ್ಷ ಶೇಷಪ್ಪಗೌಡ, ಕ್ರೀಡಾಕೂಟ ಆಯೋಜನೆ ಸಮಿತಿ ಅಧ್ಯಕ್ಷ ರಂಜಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕ ಪಿ.ಸುರೇಶ್, ಪ್ರಮುಖರಾದ ವಿಜಯಲಕ್ಷ್ಮೀ ಬಾಟ ವಿಜಯ್, ಸಂಜಿತ್, ಸುಧಾಕರ್, ಖಾಂಡ್ಯ ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಚಂದ್ರಶೇಖರ್ ರೈ ಮತ್ತಿತರರು ಹಾಜರಿದ್ದರು.