

ಮನೋಹರ ಬಳಂಜ ಬೆಳ್ತಂಗಡಿ:
ಬಹು ನಿರೀಕ್ಷೆಯ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ 73ರ ದ್ವಿಪಥ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 718 ಕೋಟಿ ರೂ. ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ 40 ಕಿ.ಮೀ. ನಿಂದ 75 ಕಿ.ಮೀ. ವರೆಗಿನ 33.1 ಕಿಮೀ ವ್ಯಾಪ್ತಿಯ ದ್ವಿಪಥ ರಸ್ತೆ ರಚನೆಗೆ ಪೂರಕವಾಗಿ ಪ್ರಾಥಮಿಕ ಹಂತದ ಸಮತಟ್ಟು ಕೆಲಸಗಳು ಮಳೆಗಾಲದ ಮುನ್ನ ಆರಂಭಗೊಂಡಿತ್ತು. ಖಾಸಗಿ ಭೂಮಿ ಸಮತಟ್ಟುಗೊಳಿಸಿ ಇದ್ದ ರಸ್ತೆ ತೆರವುಗೊಳಿಸಿ ಮಣ್ಣಿನ ರಸ್ತೆ ನಿರ್ಮಿಸಿ ಬಿಟ್ಟಿರುವುದು ಸದ್ಯ ಸಂಚಾರವನ್ನು ಮೂರಾಬಟ್ಟೆಗೊಳಿಸುವಂತೆ ಮಾಡಿದೆ.
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಪ್ರಮುಖವಾಗಿ ಮಡಂತ್ಯಾರು, ಮಾಲಾಡಿ, ಕಾಶಿಬೆಟ್ಟು, ಟಿ.ಬಿ.ಕ್ರಾಸ್, ಅನುಗ್ರಹ ಶಾಲೆ, ಮುಂಡಾಜೆ ಸೀಟು, ಸೋಮಂತಡ್ಕ, ಗುರುವಾಯನಕರೆ ಕುವೆಟ್ಟು, ಸೋಣಂದೂರು, ಪುಂಜಾಲಕಟ್ಟೆ ಸಹಿತ ನಾನಾ ಭಾಗಗಳಲ್ಲಿ ರಸ್ತೆ ಕೆಟ್ಟುಹೋಗಿ ಹೂಳು ತುಂಬಿ ಲಾರಿಗಳೇ ಮೊಣಕಾಲಷ್ಟು ಹೂತು ಹೋಗುತ್ತಿವೆ. ಇನ್ನು ದ್ವಿಚಕ್ರ ಸವಾರರ ಪರದಾಟ ಹೇಗಿರಬೇಡ. ಮಂಗಳೂರಿಗೆ ದಿನನಿತ್ಯ ಸಂಚರಿಸುವ ಆಂಬುಲೆನ್ಸ್, ಶಾಲಾ ವಾಹನ, ಸರ್ಕಾರಿ-ಖಾಸಗಿ ಬಸ್ಗಳ ಪಾಡಂತೂ ಹೇಳತೀರದಂತಾಗಿದ್ದು, ಆಂಬುಲೆನ್ಸ್ನಲ್ಲೆ ಜೀವ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆ ವಹಿಸಿಕೊಂಡಿರುವ ನಾಗಪುರದ ಪ್ರಸಿದ್ಧ ಗುತ್ತಿಗೆದಾರರಾದ ಡಿ.ಬಿ.ಜೈನ್ ಕಂಪನಿ ಮುಂಡಾಜೆ ಸುತ್ತಮುತ್ತ ಅಳವಡಿಸಿರುವ ಜಲ್ಲಿ ರಾಶಿಯಲ್ಲಿ ಸಂಪೂರ್ಣ ರಸ್ತೆಯನ್ನೇ ನಿರ್ಮಿಸಬಹುದಿತ್ತು. ಅಷ್ಟರ ಮಟ್ಟಿಗೆ ರಸ್ತೆ ಸರಿಪಡಿಸಲು ಜಲ್ಲಿ ಸುರಿಯಲಾಗಿದೆ. ಆದರೆ ತೀವ್ರ ಮಳೆಗೆ ಎಷ್ಟೇ ಸರಿಪಡಿಸಿದರೂ ನಿಲ್ಲುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗೆ ಕಾಲಿಟ್ಟರೆ ಹೂತು ಹೋಗುವ ಸ್ಥಿತಿಯಿದೆ. ಈ ಬಗ್ಗೆ ರಾಜಕೀಯ ನಾಯಕರಲ್ಲಿ ಕೇಳಿದರೆ ಮಳೆಗಾಲವರೆಗೆ ಸುದಾರಿಸಿಕೊಳ್ಳಿ ಎನ್ನುತ್ತಾರೆ. ಆದರೆ ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಸಾಮಾನ್ಯ ಜ್ಞಾನ ಇವರಿಗಿಲ್ಲ ಎಂಬುವುದು ವಿಪರ್ಯಾಸ. ಅಗೆದು ಹಾಕಿರುವ ಸ್ಥಳವನ್ನಾದರೂ ಡಾಂಬರೀಕರಣ ಮಾಡಬೇಕಿತ್ತು. ಅದು ಮಾಡದ ಪರಿಣಾಮ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾಯನಕೆರೆಯಿಂದ ಉಜಿರೆವರೆಗೆ ಸರ್ವೀಸ್ ರಸ್ತೆ ಒಳಗೊಂಡಂತೆ 30 ಮೀಟರ್ ರಸ್ತೆ ವಿಸ್ತರಣೆಯಾಗಲಿದೆ. ಪ್ರಸಕ್ತ ನಿರ್ಮಿಸಿರುವ ಚರಂಡಿಯಲ್ಲಿ ಮಣ್ಣು ಹೂಳು ತುಂಬಿದೆ. ಮುಂದೆ ಇದು ಉಪಯೋಗಕ್ಕೆ ಬರುವುದೇ ಅನುಮಾನ ಎಂಬಂತಾಗಿದೆ.
ಗುತ್ತಿಗೆದಾರ ಕಂಪನಿ ತನ್ನ ನೌಕರರನ್ನು ದುಡಿಸಿ ಸಂಬಳ ನೀಡದೆ ಕೈಚೆಲ್ಲಿ ಕುಳಿತಿದೆ. ಗುತ್ತಿಗೆದಾರ ಇಂಜಿನಿಯರ್ಗಳ ಕರೆ ಸ್ವೀಕರಿಸದೆ ಭೂಗತನಾಗಿದ್ದಾನೆ. ಈ ಪ್ರದೇಶದ ಸ್ಥಿತಿ ಕುರಿತು ತಿಳಿಸಿ ಕಾಮಗಾರಿ ನಡೆಸಬೇಕಿದ್ದ ಹೆದ್ದಾರಿ ಗುತ್ತಿಗೆದಾರರನ್ನು ಅಮಾನತುಗೊಳಿಸಬೇಕು. ವಾಹನ ಸವಾರರು ಎಲ್ಲ ರೀತಿಯ ತೆರಿಗೆ ನೀಡಿ ವಾಹನ ಖರೀದಿಸುತ್ತಾರೆ. ಆದರೆ ರಸ್ತೆ ಸುರಕ್ಷತೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಅವ್ಯವಸ್ಥೆ ಕಂಡು ಮಡಂತ್ಯಾರು ವರ್ತಕರು ತಾವೇ ಶ್ರಮದಾನ ಮಾಡುವ ಮೂಲಕ ಹೆದ್ದಾರಿ ದುರಸ್ತಿಗೆ ಮುಂದಾಗಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮಾಡಿರುವ ಅವಾಂತರ ನಡುವೆ ಇರುವ ರಸ್ತೆಗಳು ಹೊಂಡಮಯವಾಗಿರುವುದರಿಂದ ರೋಗಿಗಳನ್ನು ಕರೆದೊಯ್ಯುವುದು ಸವಾಲಾಗಿದೆ. 40 ನಿಮಿಷದಲ್ಲಿ ಮಂಗಳೂರು ತಲುಪುವ ನಮಗೆ 1.30 ತಾಸು ಬೇಕಾಗುತ್ತದೆ. ಹೊಂಡಕ್ಕೆ ಬೀಳುವುದರಿಂದ ಮೂಳೆ ಮುರಿತಕ್ಕೆ ಒಳಗಾದವರನ್ನು, ಸಮಯಕ್ಕೆ ಸರಿಯಾಗಿ ರೋಗಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಹಮೀದ್, ಸಮುದಾಯ ಆಸ್ಪತ್ರೆ ಆಂಬುಲೆನ್ಸ್ ಚಾಲಕ
ಹಮೀದ್, ಸಮುದಾಯ ಆಸ್ಪತ್ರೆ ಆಂಬುಲೆನ್ಸ್ ಚಾಲಕ