ಸಚಿವರ ನಡಿಗೆ ವಾರ್ಡ್​ಗಳ ಕಡೆಗೆ : ಕಾಲ್ನಡಿಗೆಯಲ್ಲೇ ಎಂಟಿಬಿ ಅಹವಾಲು ಸ್ವೀಕಾರ

11
Published on

ಹೊಸಕೋಟೆ: ಡಿಸಿ ನಡಿಗೆ ಹಳ್ಳಿಯ ಕಡೆಗೆ ಮಾದರಿಯಲ್ಲೇ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್​ ಬುಧವಾರ ನಗರಸಭೆ ಅಧ್ಯಕ್ಷ, ಸದಸ್ಯರಾದಿಯಾಗಿ ಅಧಿಕಾರಿಗಳ ತಂಡದೊಂದಿಗೆ ವಾರ್ಡ್​ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.


ಗೌತಮ್​ ಕಾಲನಿ, ಪಾರ್ವತಿಪುರ, ಹೌಸಿಂಗ್​ಬೋರ್ಡ್​ ಮತ್ತಿತರ ವಾರ್ಡ್​ಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿದ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್​, ಸದಸ್ಯರಾದ ಆನಂದ್​, ವೆಂಕಟೇಶ್​ ಮತ್ತಿತರ ಸದಸ್ಯರು ಸಚಿವರಿಗೆ ವಾರ್ಡ್​ಗಳಲ್ಲಿನ ಸಮಸ್ಯೆಗಳ ಬಗ್ಗೆ ಪ್ರತ್ಯಕ್ಷ ದರ್ಶನ ಮಾಡಿಸಿದರು.

ಸ್ಥಳದಲ್ಲೇ ಪರಿಹಾರ: ಹಲವು ದಿನಗಳಿಂದ ನೀರು ಬರುತ್ತಿಲ್ಲ. ಈ ರಸ್ತೆಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ, ಪಿಂಚಣಿ ಬರುತ್ತಿಲ್ಲ, ವಿದ್ಯಾರ್ಥಿವೇತನ ಸಿಕ್ಕಿಲ್ಲ. ಚರಂಡಿ ವ್ಯವಸ್ಥೆ ಇಲ್ಲ, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುವುದು ಸೇರಿ ಇನ್ನಿತರ ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳಿಯರು ಮನವಿ ಮಾಡಿದರು. ಈ ವೇಳೆ ಸಚಿವರು, ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಜಮೀನು ವಿವಾದ, ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಸೇರಿ ಮೂಲಸೌಕರ್ಯ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ಸರ್ಕಾರದ ಸವಲತ್ತುಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಡಿಸಿ ನಡಿಗೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಜಿಲ್ಲಾಡಳಿತವೇ ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಮಾಡಿದೆ. ಇಂಥ ಸಂದರ್ಭದಲ್ಲೂ ಸರ್ಕಾರದ ಸೌಲಭ್ಯಗಳನ್ನು ಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮೀನಮೇಷ ಏಣಿಸುವುದು ಏಕೆ ಎಂದು ತರಾಟೆ ತೆಗೆದುಕೊಂಡ ಸಚಿವರು, ಇಂಥ ಪರಿಸ್ಥಿತಿ ಪುನಾವರ್ತನೆಯಾದರೆ ಶಿಸ್ತು ಮಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನೌಕರಿ ಕಾಯಂ ಆಗುತ್ತೆ ಯೋಚಿಸಬೇಡ: ವಾರ್ಡ್​ 13ರಲ್ಲಿ ಗುತ್ತಿಗೆ ಪೌರಕಾರ್ಮಿಕರ ಮನೆಯೊಂದಕ್ಕೆ ಭೇಟಿ ನೀಡಿದ ಸಚಿವರಿಗೆ ಪೌರಕಾರ್ಮಿಕ ಕುಟುಂಬದವರು ನೌಕರಿ ಕಾಯಂಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಲವು ದಿನಗಳಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶ್ರೀದಲ್ಲೇ ನಿಮ್ಮ ಕೆಲಸ ಕಾಯಂ ಆಗಲಿದೆ ಯೋಚಿಸಬೇಡಿ ಎಂದು ಭರವಸೆ ನೀಡಿದರು.

ವಾರ್ಡ್​ವಾರು ಕುಂದುಕೊರತೆ ಸಭೆ: ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ಸಲುವಾಗಿ ಹೊಸಕೋಟೆ ತಾಲೂಕಿನಲ್ಲಿ ವಾರ್ಡ್​ವಾರು ಕುಂದುಕೊರತೆ ಸಭೆ ಆಯೋಜಿಸಲಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್​ ತಿಳಿಸಿದರು. ಹೊಸಕೋಟೆ ನಗರಸಭೆ ವೇಗವಾಗಿ ಬೆಳೆಯುತ್ತಿದೆ, ಜನಸಂಖ್ಯೆಯೂ ಹೆಚ್ಚುತ್ತಿದೆ, ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ, ಪ್ರಸ್ತುತ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ವಾರ್ಡ್​ವಾರು ಸಭೆ ನಡೆಸಿ ಸಮಸ್ಯೆಗಳ ಪ್ರತ್ಯಕ್ಷ ದರ್ಶನ ಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net