

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದಾಹದಿಂದ ಅವೈಜ್ಞಾನಿಕವಾದ ಹಾಗೂ ಅಭಿವೃದ್ಧಿಗೆ ಮಾರಕವಾದ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಇದೀಗ ಸರ್ಕಾರದ ಖಜಾನೆಯನ್ನೇ ಖಾಲಿ ಮಾಡಿಕೊಂಡಿದೆ, ಅದನ್ನು ತುಂಬಲು ಬೆಲೆ ಏರಿಕೆ ಭೂತ ಬಿಟ್ಟು ಜನ ಸಾಮಾನ್ಯರ ಬದುಕನ್ನು ಅಂತಂತ್ರ ಸ್ಥಿತಿಗೆ ತಳ್ಳಿದೆ ಎಂದು ಮಾಜಿ ಸಚಿವ ಹಾಗೂ ಎಂಎಲ್‌ಸಿ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.
ಗರುಡಾಚಾರ್‌ಪಾಳ್ಯದ ಗೃಹಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಿಡಿಯಬೇಕೆಂಬ ಒಂದೇ ಕಾರಣಕ್ಕಾಗಿ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿ ಇದೀಗ ಸರ್ಕಾರವೂ ಅಂತ್ರವಾಗಿದ್ದು, ಜನರ ಜೀವನವನ್ನು ಅಂತಂತ್ರಗೊಳಿಸಿದೆ ಎಂದು ದೂರಿದರು. ಒಂದು ಕೈನಲ್ಲಿ ಕೊಟ್ಟು ಎರಡೂ ಕೈಗಳಿಂದ ಕಿತ್ತುಕೊಳ್ಳುವಂತ ನೀತಿಯಿಂದಾಗಿ ರಾಜ್ಯದ ಜನರು ಕಂಗಾಲಾಗಿದ್ದಾರೆ, ದಿನೆ ದಿನೇ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ವರ್ಗದ ಬದುಕು ದುರ್ಬಲಗೊಳಿಸಲಾಗುತ್ತಿದೆ ಎಂದು ಹರಿಹಾಯ್ದರು.
ರಾಜ್ಯದ ಅಧಃಪತನ: ಕಳೆದ 20 ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಮದ್ಯದ ಬೆಲೆ ಏರಿಸಿದೆ ಇದರ ಜತೆಗೆ ನಾಯಿಕೊಡೆಗಳಂತೆ ಗಲ್ಲಿಗೊಂದು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿ ಜನರನ್ನು ಕುಡಿತದ ಚಟಕ್ಕೆ ತಳ್ಳುವ ಜತೆಗೆ ಅವರ ಆರ್ಥಿಕ ಪರಿಸ್ಥಿತಿಯನ್ನು ಸಂಕಷ್ಟಕ್ಕೆ ಸಿಲುಕಿಸಿ ರಾಜ್ಯದ ಅಧಃಪತನಕ್ಕೆ ಕಾರಣವಾಗಿದೆ, ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಏರಿಸಿ ಬಡ ಹಾಗೂ ಮಧ್ಯಮ ವರ್ಗದ ಜನರು ತತ್ತರಿಸುವಂತೆ ಮಾಡಿದೆ ಎಂದು ಎಂಟಿಬಿ ಆಕ್ರೋಶ ಹೊರಹಾಕಿದರು.
ಸಂವಿಧಾನ ಉಲ್ಲಂಘನೆ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾನೂನು ಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಸಂವಿಧಾನದ ನೀತಿಯನ್ನೇ ಉಲ್ಲಂಸಿದೆ, ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ ಬ್ಯಾಂಕಿಗಾಗಿ ದಲಿತ ಹಿಂದುಳಿದವರನ್ನು ಕಡೆಗಣಿಸಿ ಕೇವಲ ಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡುವ ಮೂಲಕ ಇನ್ನಿತರ ಸಮುದಾಯಗಳನ್ನು ಕಡೆಗಣಿಸಿದ್ದಾರೆ, ಕಳೆದ ಅವಧಿಯಲ್ಲಿ ಕಳೆದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ನಾನು ಸಂಪುಟದ ಮಂತ್ರಿಯಾಗಿ ಅವರನ್ನು ಹತ್ತಿರದಿಂದ ಕಂಡಿದ್ದೇನೆ, ಈಗ ಇವರು ಕೇವಲ ಕೈಕಟ್ಟಿ ಬಾಯಿ ಮುಚ್ಚಿಕೊಂಡು ಅಧಿಕಾರ ನಡೆಸುವಂತ ಪರಿಸ್ಥಿತಿಗೆ ಸಿಲುಕಿದ್ದಾರೆ ಎಂದು ಎಂಟಿಬಿ ನಾಗರಾಜ್ ದೂರಿದರು.
ಆಡಳಿತ ವಿರೋಧಿ ಅಲೆ: ಸಾಮಾನ್ಯವಾಗಿ ಸರ್ಕಾರ ಅಧಿಕಾರಕ್ಕೆ ಬಂದ ಮೂರ‌್ನಾಲ್ಕು ವರ್ಷದ ಬಳಿಕ ಆಡಳಿತ ವಿರೋದಿ ಅಲೆ ಕಾಣಿಸಿಕೊಳ್ಳುತ್ತದೆ ಆದರೆ ಈ ಸರ್ಕಾರ ಬಂದ 100 ದಿನಗಳಲ್ಲಿಯೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ, ಸ್ವಪಕ್ಷದ ಶಾಸಕರೇ ಅಭಿವೃದ್ದಿ ಕುಂಠಿತ, ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದು ಅಸಮಾಧಾನ ಹೊರ ಹಾಕುತ್ತಿದ್ದಾರೆ ಹಲವು ಹಗರಣಗಳ ಸುಳಿಗೆ ಸಿಲುಕಿ ಅಧಿಕಾರಕ್ಕೆ ಬಂದ ದಿನದಿಂದಲೇ ಸರ್ಕಾರ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.