

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕು ಬೆಂಡಿಗಾನಹಳ್ಳಿ ಮತಗಟ್ಟೆ ಸಂಖ್ಯೆ 23ರಲ್ಲಿ ಕಾಂಗ್ರೆಸ್ ಬೆಂಬಲಿಗರು ಹಾಗೂ ಶಾಸಕರ ಸಂಬಂಧಿಗಳು ನಕಲಿ ಮತದಾನ ಮಾಡಿಸಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾಗ ಬಿಜೆಪಿ ಏಜೆಂಟ್ ಗಣೇಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಳೀಯ ಬೆಂಬಲಿಗರು ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಕಣ್ಣೇದುರಿನಲ್ಲೇ ದೌರ್ಜನ್ಯ ನಡೆಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಪರಿಶೀಲನೆ ನಡೆಸಿ ಸೂಕ್ತಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಪಾರದರ್ಶಕ ಚುನಾವಣೆ ನಡೆಯಬೇಕು. ಆದರೆ ನಕಲಿ ಮತದಾನದ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಅಕ್ರಮ ತಡೆಯಲು ಮುಂದಾದ ಬಿಜೆಪಿ ಏಜೆಂಟ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿದರು.
ಮುಂಜಾನೆಯಿಂದಲೇ ಗಲಾಟೆ: ಮೊದಲೇ ಸಂಚು ರೂಪಿಸಿದ್ದ ಕಾಂಗ್ರೆಸ್ ಬೆಂಬಲಿಗರು ಮತದಾರ ಚೀಟಿಯಲ್ಲಿ ಹೆಸರಿಲ್ಲದವರನ್ನು ಕರೆತಂದು ಮತದಾನಕ್ಕೆ ಪ್ರಯತ್ನಿಸಿದ್ದರು. ಅಲ್ಲದೆ ಅಂಕವಿಲಕರು, ಹಿರಿಯ ನಾಗರಿಕರ ಹೆಸರಿನಲ್ಲಿ ಮತ್ಯಾರಿಂದಲೋ ನಕಲಿ ಮತದಾನಕ್ಕೆ ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ ಬಿಜೆಪಿ ಏಜೆಂಟ್ ಗಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಶಾಸಕರು ಮುಂಜಾನೆಯಿಂದಲೇ ಗಣೇಶ್ ಅವರನ್ನು ಸ್ಥಳದಿಂದ ಓಡಿಸಲು ಪ್ರಯತ್ನಿಸಿದ್ದರು. 30ಕ್ಕೂ ಹೆಚ್ಚು ಮಂದಿ ಗುಂಪುಗೂಡಿ ಗಣೇಶ್ ವಿರುದ್ಧ ಗಲಾಟೆ ಮಾಡಿದ್ದರು. ಈ ವೇಳೆ ಚುನಾವಣಾ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಸಾಕಷ್ಟು ಪ್ರಯತ್ನಿಸಿದರೂ ಗಣನೆಗೆ ತೆಗೆದುಕೊಳ್ಳದೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಗಣೇಶ್ ಅವರ ಕಾರಿನ ಗಾಜು ಪುಡಿ ಮಾಡಿ ಟಯರ್ ಪಂಕ್ಚರ್ ಮಾಡಿದ್ದಾರೆ ಎಂದು ದೂರಿದರು.
1.25 ಲಕ್ಷ ಮತದ ಅಂತರದಿಂದ ಸುಧಾಕರ್ ಗೆಲುವು
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ ಸುಧಾಕರ್ 1.25 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಎಂಟಿಬಿ ನಾಗರಾಜ್ ಭವಿಷ್ಯ ನುಡಿದರು. ಹೊಸಕೋಟೆಯಲ್ಲಿ 5 ಸಾವಿರ, ದೇವನಹಳ್ಳಿ 15 ಸಾವಿರ, ಚಿಕ್ಕಬಳ್ಳಾಪುರ 20 ಸಾವಿರ, ಬಾಗೇಪಲ್ಲಿ 5 ಸಾವಿರ, ಗೌರಿಬಿದನೂರು 10 ಸಾವಿರ, ನೆಲಮಂಗಲ 10 ಸಾವಿರ, ಯಲಹಂಕ 60 ಸಾವಿರ ಬಿಜೆಪಿ ಲೀಡ್ ಪಡೆಯಲಿದೆ ಎಂದರು.
ಬಿಜೆಪಿ ಪಟ್ಟಿನಲ್ಲಿ ನನ್ನದೇ ಮೊದಲ ಹೆಸರು ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನದೇ ಮೊದಲ ಹೆಸರಿತ್ತು. ನಂತರದಲ್ಲಿ ನನ್ನ ಮಗ ನಿತೀಶ್‌ಪುರುಷೋತ್ತಮ್ ಹೆಸರಿತ್ತು. ಈ ಬಗ್ಗೆ ಮಾತನಾಡಲು ವರಿಷ್ಠರು ದೆಹಲಿಗೆ ಆಹ್ವಾನಿಸಿದ್ದರು. ಆದರೆ ಇದನ್ನು ನಾನು ನಯವಾಗಿಯೇ ತಿರಸ್ಕರಿಸಿದ್ದೆ, ನನ್ನ ಮಗನಿಗೆ ವಿಧಾನಸಭಾ ಚುನಾವಣೆ ಮೇಲೆ ಆಸಕ್ತಿ ಇದ್ದಿದ್ದರಿಂದ ಆತನೂ ಇದಕ್ಕೂ ಒಪ್ಪಲಿಲ್ಲ. ಡಾ.ಸುಧಾಕರ್‌ಗೆ ಟಿಕೆಟ್ ನೀಡುವುದಾದರೆ ನಾವೆಲ್ಲ ಒಕ್ಕೊರಲಿನಿಂದ ಬೆಂಬಲಿಸುತ್ತೇವೆ ಎಂದು ತಿಳಿಸಿದ್ದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.