

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜಕಾಲುವೆ, ಸರ್ಕಾರಿ ಸ್ವತ್ತು, ಗೋಮಾಳ ಜಮೀನುಗಳನ್ನು ಯಾರೇ ಒತ್ತುವರಿ ಮಾಡಿದ್ದರೂ ಅದು ದೊಡ್ಡತಪ್ಪು, ಅಂತಹ ಒತ್ತುವರಿಯನ್ನು ಕಾನೂನು ಪ್ರಕಾರ ತೆರವುಗೊಳಿಸುವುದು ಸರಿ. ಆದರೆ ರಾಜಕೀಯ ದುರುದ್ದೇಶದಿಂದ ವ್ಯಕ್ತಿಯನ್ನು ಗುರಿ ಮಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.
ಹೊಸಕೋಟೆಯ 28ನೇ ವಾರ್ಡ್‌ನಲ್ಲಿ ಮಂಗಳವಾರ ನಗರಸಭೆ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದರ ವಿರುದ್ಧ ಬುಧವಾರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾನೂನಿನ ಪ್ರಕಾರ ವಾರದ ಮೊದಲೇ ನೋಟಿಸ್ ನೀಡಬೇಕು. ಆದರೆ, ದಿಢೀರ್ ಕಾರ್ಯಾಚರಣೆ ನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿರುವುದು ಸ್ಪಷ್ಟವಾಗುತ್ತದೆ ಎಂದರು. ರಾಜಕೀಯ ದುರುದ್ದೇಶದಿಂದ ಜನರಿಗೆ ತೊಂದರೆ ನೀಡುವುದು ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿ 80ಕ್ಕೂ ಹೆಚ್ಚು ಕಟ್ಟಡಗಳು ನಿರ್ಮಾಣವಾಗಿವೆ. ಕೆಲವರು ಒತ್ತುವರಿ ಮಾಡಿಕೊಂಡು ಬೇರೆ ಬೇರೆ ಉದ್ದೇಶಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕಾನೂನಿನ ಪ್ರಕಾರ ಎಲ್ಲರ ಒತ್ತುವರಿ ತೆರವುಗೊಳಿಸಬೇಕಿತ್ತು. ಆದರೆ, ಶಾಸಕ ಶರತ್‌ಬಚ್ಚೇಗೌಡ ಅಧಿಕಾರ ದುರುಪಯೋಗಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ವ್ಯಕ್ತಿಯೊಬ್ಬರ ವಿರುದ್ಧ ಸೇಡಿನ ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.
ಶಾಸಕರಿಗೆ ಆತ್ಮಸಾಕ್ಷಿ ಇದೆಯೇ? ಶಾಸಕರೇ ತೆನೆಯೂರು ಸ್ಮಶಾನ ಜಾಗವನ್ನು ಕಬಳಿಸಿಕೊಂಡಿದ್ದಾರೆ. ಆತ್ಮಸಾಕ್ಷಿ ಇದ್ದರೆ ಸ್ಮಶಾನ ಜಾಗ ಬಿಟ್ಟುಕೊಡಲಿ. ಈ ಬಗ್ಗೆ ತಹಸೀಲ್ದಾರ್ ದಾಖಲೆಗಳನ್ನು ನೀಡಿ ಎಂದು ನೋಟಿಸ್ ನೀಡಿದರೆ ಅದಕ್ಕೆ ದಾಖಲೆ ಸಲ್ಲಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ದಾಖಲೆ ಸಲ್ಲಿಸಬೇಕಿತ್ತು ಎಂದು ಎಂಟಿಬಿ ನಾಗರಾಜ್ ಕಾರವಾಗಿ ಪ್ರತಿಕ್ರಿಯಿಸಿದರು.
ಮಾಧ್ಯಮಗಳ ಮುಂದೆ ಬರಲು ಸವಾಲು ಶಾಸಕರ ಕುಟುಂಬದವರೇ ಶಾಂತನಪುರ ಸರ್ವೇ ನಂ.9ರಲ್ಲಿನ 261 ಎಕರೆ ಸರ್ಕಾರಿ ಗೋಮಾಳ ಕಬಳಿಸಿದ್ದಾರೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ತನಿಖೆ ನಡೆಸಿ ವರದಿ ನೀಡಿದ್ದಾರೆ. ಈಗಲೂ ಪಹಣಿ ಇನ್ನಿತರ ದಾಖಲೆಗಳಲ್ಲಿ ಮಂಜೂರುದಾರರ ಹೆಸರೇ ಬರುತ್ತಿದೆ. ಆದರೂ ಸ್ವಾಧೀನ ಬಿಟ್ಟು ಕೊಡದೆ ದೌರ್ಜನ್ಯ ನಡೆಸುತ್ತಿದ್ದಾರೆ. 10 ವರ್ಷದಿಂದಲೂ ದಾಖಲೆಗಳೊಂದಿಗೆ ಮಾಧ್ಯಮದ ಮುಂದೆ ಬಹಿರಂಗ ಚರ್ಚೆಗೆ ಬನ್ನಿ, ನಾನೂ ಬರುತ್ತೇನೆಂದು ಹೇಳುತ್ತಿದ್ದರೂ ಈವರೆಗೂ ಏಕೆ ಬರುತ್ತಿಲ್ಲ. ನೈತಿಕತೆ ಇದ್ದರೆ ಈಗಲೂ ಬನ್ನಿ ಎಂದು ಶಾಸಕ ಬಚ್ಚೇಗೌಡಗೆ ಎಂಟಿಬಿ ಸವಾಲು ಹಾಕಿದರು.