

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಮಳೆ ಸುರಿಯುತ್ತಿರುವುದು ತುಸು ನೆಮ್ಮದಿ ತರಿಸಿದೆ, ತೀವ್ರವಾಗಿ ಕಾಡುತ್ತಿದ್ದ ಬರಗಾಲ ದೂರವಾಗಿ, ವರುಣನ ಕೃಪೆಯಿಂದ ನಾಡು ಸಮೃದ್ಧವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕು ಮುತ್ಸಂದ್ರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಯಲ್ಲಮ್ಮ ದೇವಿ, ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಕಾವೇರಮ್ಮ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಶ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು. ಈ ಬಾರಿ ತೀವ್ರ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೆರೆಕಟ್ಟೆಗಳು ಒಣಗಿ ಜಾನುವಾರುಗಳ ಮೇವಿವೂ ತತ್ಪಾರ ಎದುರಾಗಿದೆ. ಇಂಥ ಸಂದರ್ಭದಲ್ಲಿ ಅನೇಕ ದೇಗುಲಗಳಲ್ಲಿ ಮಳೆಗಾಗಿ ಹೋಮ ಹವನ ಸೇರಿ ವಿವಿಧ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದೆ. ಎಲ್ಲರೂ ಒಂದಾಗಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವರ ಕೃಪೆಯಿಂದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಇದು ಹೀಗೆ ಮುಂದುವರೆದು ಕೆರೆಕಟ್ಟೆಗಳು ಭರ್ತಿಯಾಗಲಿದೆ ಎಂದು ಆಶಭಾವ ವ್ಯಕ್ತಪಡಿಸಿದರು. ಉತ್ತಮ ಮಳೆ ಸುರಿದು ನಾಡಿನಾದ್ಯಂತ ಸಮೃದ್ಧ ಬೆಳೆಯಾಗಲಿದೆ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಯಾವಾಗಲೂ ರಾಜಕೀಯ ಬೇಡ: ಚುನಾವಣೆ ವೇಳೆಯಲ್ಲಷ್ಟೇ ರಾಜಕೀಯ ಮಾಡಬೇಕು, ಚುನಾವಣೆ ನಡೆದ ಬಳಿಕ ಅದರ ಗುಂಗಿನಿಂದ ಹೊರಬರಬೇಕು ಯಾವಾಗಲೂ ರಾಜಕೀಯದಲ್ಲಿ ಮುಳಗದೆ ದೇವರು, ಧಾರ್ಮಿಕ ಕಾರ್ಯಗಳತ್ತ ಮನಸ್ಸನ್ನು ಹರಿಬಿಡಬೇಕು ಎಂದು ಎಂಟಿಬಿ ಸಲಹೆ ನೀಡಿದರು. ಧಾರ್ಮಿಕ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಜೀವಿತಾವಧಿಯಲ್ಲಿ ಸ್ಥಿತಿವಂತರು ಕೈಲಾಗದವರ ನೆರವಿಗೆ ನಿಲ್ಲಬೇಕು, ದಾನ ಮಾಡಿ ಕೆಟ್ಟವರಿಲ್ಲ ಎಂಬ ನಾಣ್ನುಡಿ ಇದೆ ಇದೇ ರೀತಿ ಬದುಕಿ ಜೀವನ ಸಾರ್ಥಕಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ದೇವರ ಕಾರ್ಯ ಒಗ್ಗೂಡಿಸುತ್ತವೆ: ಗ್ರಾಮಗಳಲ್ಲಿ ನಡೆಯುವ ಜಾತ್ರೆ, ರಥೋತ್ಸವದಂತ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತವೆ. ಎಲ್ಲರೂ ಒಂದೆ ಎಂಬ ಭಾವನೆ ಮೂಲಕ ದೇವರ ಆರಾಧನೆ ಮಾಡಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಇಂಥ ಧಾರ್ಮಿಕ ಕಾರ್ಯಕ್ರಮಗಳಿಗೆ ತಳಪಾಯ ಹಾಕಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಚನ್ನಸಂದ್ರ ನಾಗರಾಜ್ ಹೇಳಿದರು. ಗ್ರಾಮ ದೇವತೆಗಳಿಗೆ ವಿಶೇಷ ಶಕ್ತಿ ಇರುತ್ತದೆ, ಗ್ರಾಮ ದೇವತೆಗಳು ಗ್ರಾಮಗಳನ್ನು ಕಾಯುತ್ತವೆ, ರೋಗರುಜಿನಗಳಿಂದ, ಆಪತ್ತುಗಳಿಂದ ಗ್ರಾಮಗಳನ್ನು ರಕ್ಷಣೆ ಮಾಡುತ್ತಾರೆ ಎಂಬುದು ಪೂರ್ವಿಕರ ಅಚಲ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ, ಇಂಥ ದೇಗುಲಗಳಿಗೆ ತನ್ನದೆ ಆದ ಇತಿಹಾಸಗಳಿವೆ ಎಂದರು.