ಎಷ್ಟೇ ಪಕ್ಷ ಒಗ್ಗೂಡಿದರೂ ಮೋದಿ ಕಟ್ಟಿಹಾಕಲು ಸಾಧ್ಯವಿಲ್ಲ

mtb news
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಎಷ್ಟೇ ಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ ತೊಡೆತಟ್ಟಿದರೂ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಮತ್ತೆ ಸುಭದ್ರ ಹಾಗೂ ಸುಸ್ಥಿರ ಸರ್ಕಾರ ರಚನೆಯಾಗಲಿದೆ, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಯಾವುದೇ ತಂತ್ರ ರೂಪಿಸಿದರೂ ಪ್ರಯೋಜನವಾಗುವುದಿಲ್ಲ ಎಂದರು.

ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ: ಕಲಾಪದಲ್ಲಿ ಈ ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ವಿಧೇಯಕ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದ ಪ್ರಕರಣಗಳು ನಡೆದಿವೆ. ಮೈಕ್ ಕಿತ್ತು ಎಸೆದ ಪ್ರಕರಣಗಳೂ ನಡೆದಿವೆ, ಹಾಗೆಯೇ ಸಭಾಪತಿಗಳನ್ನು ಎಳೆದಾಡಿದ ಪ್ರಸಂಗಗಳು ಕಣ್ಣಮುಂದಿವೆ. ಪ್ರತಿಪಕ್ಷಗಳ ಪ್ರಶ್ನೆಗೆ ಆಡಳಿತ ಪಕ್ಷ ಸಮಾಧಾನದ ಉತ್ತರ ನೀಡುವುದನ್ನು ಬಿಟ್ಟು ಶಾಸಕರನ್ನು ಅಮಾನತುಗೊಳಿಸಿ ಮಾರ್ಷಲ್‌ಗಳ ಮೂಲಕ ಹೊರದಬ್ಬುವ ಕೆಲಸಕ್ಕೆ ಕೈಹಾಕಬಾರದಿತ್ತು, ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಇದ್ದಂತೆ, ಇದು ಮರುಕಳಿಸಬಾರದು ಎಂದು ಎಂಟಿಬಿ ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಎಂಪಿ ಅಭ್ಯರ್ಥಿ? ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ ಎಂದ ಎಂಟಿಬಿ ನಾಗರಾಜ್, ಪಕ್ಷದ ವರಿಷ್ಠರು, ಮುಖಂಡರ ತೀರ್ಮಾನಕ್ಕೆ ಸದಾ ಬದ್ಧನಾಗಿರುತ್ತೇನೆ. ಮುಂದಿನ ದಿನಗಳನ್ನು ಕಾದು ನೋಡೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net