

ಬೆಂಗಳೂರು: ಮುಂದಿನ ಸಂಪುಟ ವಿಸ್ತರಣೆಯಲ್ಲೂ ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿರುವ ಮಾಜಿ ಶಾಸಕ ಎಂಟಿಬಿ ನಾಗರಾಜ್, ಮುಖ್ಯಮಂತ್ರಿ ಮೇಲೆ ಒತ್ತಡ ತಂತ್ರ ಮುಂದುವರಿಸಿದ್ದಾರೆ.
ನಿರಂತರವಾಗಿ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಗೋಗರೆಯುತ್ತಿರುವ ಅವರು, ಪ್ರಯತ್ನವನ್ನು ಗುರುವಾರ ಸಹ ಮುಂದುವರಿಸಿದ್ದರು. ತಾವು ಈಗಲೇ ಸಚಿವರಾಗಲು ಸಮಸ್ಯೆ ಇಲ್ಲ ಎಂಬ ಕಾನೂನು ತಜ್ಞರ ಅಭಿಪ್ರಾಯವನ್ನು ಸಿಎಂ ಮುಂದಿಟ್ಟರು. ಸಿಎಂ ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಸೋತವರಿಗೆ ಸಚಿವ ಸ್ಥಾನ ಇಲ್ಲ ಅಂದಿದ್ದಕ್ಕೆ ನಾನು ಕಾನೂನು ಅಭಿಪ್ರಾಯ ಪಡೆದಿದ್ದೇನೆ. ಒಮ್ಮೆ ನಾಮಪತ್ರ ಸಲ್ಲಿಸಿ ಅದು ಸ್ವೀಕಾರವಾಗಿ ಚುನಾವಣೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ, ಅಲ್ಲಿಗೆ ಸುಪ್ರೀಂಕೋರ್ಟ್ ಆದೇಶ ರದ್ದಾಗುತ್ತದೆ. ಅದರ ನಂತರ ಯಾವುದೇ ಹುದ್ದೆ ಪಡೆಯಬಹುದೆಂದು ಕಾನೂನು ತಜ್ಞರು ಅಭಿಪ್ರಾಯ ನೀಡಿದ್ದಾರೆ’ ಎಂದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದಲೂ ಕಾನೂನು ಸಲಹೆಯನ್ನೂ ಪಡೆದುಕೊಂಡು ಬಂದಿದ್ದೇನೆ. ಸಿಎಂ ಬಳಿಯೂ ಕಾನೂನು ಅಭಿಪ್ರಾಯ ಬಗ್ಗೆ ಚರ್ಚೆ ಮಾಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ಮಾಡೋಣ ವೆಂದು ಅಂತ ಸಿಎಂ ಹೇಳಿದ್ದಾರೆ ಎಂದು ವಿವರಿಸಿದರು.
ನಿಗಮ ಮಂಡಳಿ ಕೊಟ್ಟರೆ ಸಾಕು ಎಂಬ ಹಂತಕ್ಕೆ ಬಂದಿದ್ದೇನೆಂಬುದು ಸುಳ್ಳು. ನಾನು ಅಧಿಕಾರ ಬೇಕು ಎಂಬ ಷರತ್ತು ಹಾಕಿ ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದಲ್ಲಿ ಬೇಸತ್ತು ಬಂದಿದ್ದೇನೆ. ಜೂನ್ನಲ್ಲಿ ನನಗೂ ವಿಧಾನಪರಿಷತ್ನಲ್ಲಿ ಅವಕಾಶ ಕೊಡುವ ಭರವಸೆ ಇದೆ ಎಂದು ಎಂಟಿಬಿ ನಾಗರಾಜ್ ಹೇಳಿದರು.