

ಬೆಂಗಳೂರು ಗ್ರಾಮಾಂತರ
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರಾವಧಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಬಗ್ಗೆಯೇ ಜಪ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸದಾ ಕಾಲ ಶ್ರಮಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್ಪಾಳ್ಯದ ಸಚಿವರ ಗೃಹಕಚೇರಿಯಲ್ಲಿ ಶುಕ್ರವಾರ ಸಮೇತನಹಳ್ಳಿ ಪಂಚಾಯಿತಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹೊಸಕೋಟೆ ತಾಲೂಕಿನಲ್ಲಿ ಸಮೇತನಹಳ್ಳಿ ಗ್ರಾಪಂ ಪಂಚಾಯಿತಿ ಮಾದರಿ ಎನಿಸಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಹೆಸರು ತರಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರಿಗೆ ಸನ್ಮಾನ: ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಮಮತಾ ಶ್ರೀನಿವಾಸ್ ಅವರನ್ನು ಸನ್ಮಾನಿಸಿದ ಸಚಿವರು, ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸಗಳಿಸಿ ಅವರ ಸಹಕಾರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು, ಮುಖ್ಯವಾಗಿ ಕುಡಿಯುವ ನೀರು, ಚರಂಡಿ, ರಸ್ತೆಯಂಥ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಉತ್ತಮ ಕೆಲಸ ಮಾಡಲಿದ್ದಾರೆ: 22 ಬಿಜೆಪಿ ಬೆಂಬಲಿತ ಸದಸ್ಯರ ಬಲದಿಂದ ಸಮೇತನಹಳ್ಳಿ ಪಂಚಾಯಿತಿಯಲ್ಲಿ ಈ ಹಿಂದೆ ಸುಜಾತಾ ಅವರು 10 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ಮಮತಾ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರಿಗಿಂತಲೂ ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿಎಂಆರ್ಡಿ ಅಧ್ಯ ಶಂಕರೇಗೌಡ ಹೇಳಿದರು.