ಸಚಿವ ಸ್ಥಾನಕ್ಕೆ ಯಾವುದೇ ಅಡೆ-ತಡೆ ಉಂಟಾಗದಿರಲೆಂದು ಕುರುಡುಮಲೆ ವಿನಾಯಕನಿಗೆ ಹರಕೆ ಹೊತ್ತ ಎಂಟಿಬಿ ನಾಗರಾಜ್

8 mbl ph 3A
Published on

ಮುಳಬಾಗಿಲು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಮಾಜಿ ಸಚಿವ ಎಂಟಿಬಿ ನಾಗರಾಜು ಯಾವುದೇ ಅಡೆ-ತಡೆ ಉಂಟಾಗದಿರಲೆಂದು ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನ ಮೊರೆ ಹೋಗಿದ್ದಾರೆ.

ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ತಯಾರಿ ನಡೆಸಿರುವುದರ ಹಿನ್ನೆಲೆಯಲ್ಲಿ ಎಂಟಿಬಿ ಯಾರಿಗೂ ಸುಳಿವು ನೀಡದೆ ಕುರುಡುಮಲೆಗೆ ಭೇಟಿ ನೀಡಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ, ಸಚಿವನಾದರೆ 50 ಲಕ್ಷ ರೂ. ವೆಚ್ಚದಲ್ಲಿ ಗೋಪುರ ನಿರ್ಮಿಸಿಕೊಡುವುದಾಗಿ ಹರಕೆ ಹೊತ್ತಿರುವುದು ಕುತೂಹಲಕ್ಕೆ ಎಡೆ ಮಾಡಿದೆ.

ಎಂಟಿಬಿ ಕುರುಡುಮಲೆಗೆ ಬರುವ ವಿಷಯ ಗೌಪ್ಯವಾಗಿಟ್ಟಿದ್ದರು. ಆದರೆ ಅದು ಹೇಗೋ ಸಚಿವ ಎಚ್.ನಾಗೇಶ್ ಅವರಿಗೆ ತಿಳಿಯುತ್ತಿದ್ದಂತೆ ಕುರುಡುಮಲೆಗೆ ಬಂದು ಆಪ್ತರಾದ ಎಂಟಿಬಿಯನ್ನು ಸ್ವಾಗತಿಸಿ ದೇವರು ನಿಮಗೆ ಒಳ್ಳೆಯದು ಮಾಡಲಿ, ನೀವು ಸಚಿವರಾಗಲು ನನ್ನ ಸಹಮತ ಹಾಗೂ ಬೆಂಬಲವಿದೆ ಎಂದು ಹೇಳಿದ್ದಾರೆ.

ಖುಷಿಯಿಂದಲೇ ಎಲ್ಲರೊಂದಿಗೆ ಮಾತನಾಡಿದ ಎಂಟಿಬಿ, ಸಚಿವನಾಗಲು ಅವಕಾಶ ಸಿಕ್ಕಲ್ಲಿ ದೇವಾಲಯಕ್ಕೆ 50 ಲಕ್ಷ ರೂ. ದೇಣಿಗೆ ನೀಡಿ ಗೋಪುರ ನಿರ್ಮಿಸಿಕೊಡುವೆ ಎಂದು ಆಶ್ವಾಸನೆ ನೀಡಿದ್ದು, ವಿಘ್ನ ನಿವಾರಕ ಕೃಪೆ ತೋರುವನೇ ಕಾದು ನೋಡಬೇಕು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಗಳಿಸಿದ್ದರೂ ರಾಜಕೀಯ ಗೊಂದಲಗಳಿಂದ ಬಂಡಾಯವೆದ್ದು ಬಿಜೆಪಿಗೆ ಜಿಗಿದು ಸರ್ಕಾರ ಉರುಳಿಸಿದ್ದಕ್ಕಾಗಿ ಎಂಟಿಬಿ ಸೇರಿ 15 ಶಾಸಕರನ್ನು ಅಂದಿನ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.

2022ರವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಸರ್ಕಾರದಲ್ಲಿ ಯಾವುದೇ ಅಧಿಕಾರ ಪಡೆಯುವಂತಿಲ್ಲವೆಂದು ಆದೇಶಿಸಿದ್ದರಿಂದ ಸ್ವೀಕರ್ ನಿಲುವಿನ ವಿರುದ್ಧ ನ್ಯಾಯಾಲಯದಲ್ಲಿ ಸಮರ ನಡೆಸಿದ್ದರು, ಸುಪ್ರೀಂಕೋರ್ಟ್ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದೆಂದು ನೀಡಿದ ತೀರ್ಪಿನಿಂದಾಗಿ ಉಪ ಚುನಾವಣೆಗೆ ಸ್ಪರ್ಧಿಸಿದ್ದರಾದರೂ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಎದುರು ಸೋಲು ಕಾಣಬೇಕಾಯಿತು.

ನಮ್ಮ ಸೋಲಿಗೆ ಸಂಸದ ಬಚ್ಚೇಗೌಡ ಮತ್ತು ಶರತ್ ಕಾರಣ, ಇವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಈ ಮೊದಲು ನೀಡಿದ ಭರವಸೆಯಂತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಎಂಟಿಬಿ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದು, ಜ.15ರ ನಂತರ ಸಂಪುಟ ವಿಸ್ತರಣೆಯಾಗುವ ಸ್ಪಷ್ಟ ಚಿತ್ರಣ ಸಿಕ್ಕಿರುವುದರಿಂದ ದೇವರ ಮೊರೆ ಹೋಗಿದ್ದಾರೆನ್ನಲಾಗಿದೆ.

ಎಂಟಿಬಿ ಸಚಿವರಾಗಲಿ: ಎಂಟಿಬಿ ನನ್ನ ಆತ್ಮೀಯರು, ಒಳ್ಳೆ ಮನುಷ್ಯ, ಶರತ್ ಸ್ಪರ್ಧಿಸದಿದ್ದಲ್ಲಿ ಗೆಲ್ಲುತ್ತಿದ್ದರು, ಅವರು ಸೋಲಬಾರದಾಗಿತ್ತು, ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ಎಂಟಿಬಿಗೆ ಸಚಿವ ಸ್ಥಾನ ನೀಡಬೇಕು, ನನ್ನ ಸಹಮತವಿದೆ, ಬಿಜೆಪಿ ಸರ್ಕಾರ ಇನ್ನಷ್ಟು ದಿನ ಗಟ್ಟಿಗೊಳ್ಳಲು ಎಂಟಿಬಿ ಅಂತಹವರು ಸಚಿವ ಸಂಪುಟದಲ್ಲಿ ಇರಬೇಕೆಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net